

ಚೆನ್ನೈ: ವಿಜಯ್ ಮತ್ತು ವಿಜಯ್ ಸೇತುಪತಿ ಮೊದಲ ಬಾರಿಗೆ ಜತೆಯಾಗಿ ನಟಿಸಿದ 'ಮಾಸ್ಟರ್' ಚಿತ್ರವು ನಾಳೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ವಿಜಯ್ ಅಭಿಮಾನಿಗಳು ಚಿತ್ರದ ಬಗ್ಗೆ ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಒಂದಿಷ್ಟು ತುಣುಕುಗಳು ಇಂತು ಇಂಟರ್ನೆಟ್ನಲ್ಲಿ ಪತ್ತೆಯಾಗಿದೆ.
ಹೌದು, ಮಂಗಳವಾರ ಬೆಳಿಗ್ಗೆ 'ಮಾಸ್ಟರ್' ಚಿತ್ರದ ತುಣುಕುಗಳು ಬಿಡುಗಡೆಯಾಗಿದ್ದು, ಚಿತ್ರತಂಡದವರಷ್ಟೇ ಅಲ್ಲ, ಇಡೀ ಚಿತ್ರರಂಗವೇ ಇದರಿಂದ ಶಾಕ್ ಆಗಿದೆ. ಯಾವಾಗ ಚಿತ್ರದ ತುಣುಕುಗಳು ಲೀಕ್ ಆಗಿದ್ದು ಗೊತ್ತಾಯಿತೋ, ಖುದ್ದು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಮುಂದೆ ಬಂದು, ಅದನ್ನು ಶೇರ್ ಮಾಡಬೇಡಿ ಎಂದು ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಳೆದ ಒಂದೂವರೆ ವರ್ಷಗಳಿಂದ ನಾವೆಲ್ಲ ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟು ದುಡಿದಿದ್ದೇವೆ. ನೀವೆಲ್ಲ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬೇಕು ಎಂಬುದು ನಮ್ಮಾಸೆ. ಅದೇ ಕಾರಣಕ್ಕೆ, ಹಲವು ಸಮಸ್ಯೆಗಳ ನಡುವೆಯೂ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುತ್ತಿದ್ದೇವೆ. ಹೀಗಿರುವಾಗ ಚಿತ್ರದ ತುಣುಕುಗಳು ಲೀಕ್ ಆಗಿವೆ. ದಯವಿಟ್ಟು ಇದನ್ನು ಯಾರೂ ಸಹ ಶೇರ್ ಮಾಡಬೇಡಿ. ಇನ್ನೊಂದೇ ಒಂದು ದಿನ ಕಾಯಿರಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮನುರಂಜನ್ ಮನದಾಳ: ಸೋಲಿನ ಪರಾಮರ್ಶೆಯೋ? ಅವಲೋಕನವೋ?
ತುಣುಕುಗಳೇನೋ ಲೀಕ್ ಆದವು. ಆದರೆ, ಅದನ್ನು ಲೀಕ್ ಮಾಡಿದ್ದು ಯಾರು? ಸಾಕಷ್ಟು ತನಿಖೆಯ ನಂತರ ಸೋನಿ ಡಿಜಿಟಲ್ ಕಂಪನಿಯ ಉದ್ಯೋಗಿಯೊಬ್ಬ ಈ ತುಣುಕುಗಳನ್ನು ಲೀಕ್ ಮಾಡಿದ್ದಾನೆ ಎಂದು ಪತ್ತೆ ಹಚ್ಚಲಾಗಿದ್ದು, ಈಗ ಆ ಸಂಸ್ಥೆಯ ಮೇಲೆ ಚಿತ್ರತಂಡದವರು ಆಕ್ಷನ್ ತೆಗೆದುಕೊಳ್ಳುವ ಕುರಿತು ಯೋಚಿಸಲಾಗುತ್ತಿದೆ.