

ಕಾಬುಲ್: ಅಫ್ಘನ್ ವಶಪಡಿಸಿಕೊಂಡಿರುವ ತಾಲಿಬಾನಿಗಳು, ಆಗಸ್ಟ್ 31ರ ತನಕ ಯಾವುದೇ ಮಹತ್ವದ ನಿರ್ಧಾರ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಅಮೆರಿಕದ ನಾಯಕರ ಜತೆಗೆ ತಾಲಿಬಾನ್ನ ಮುಖ್ಯ ಮಧ್ಯಸ್ಥಿಕೆದಾರ ಅನಾಸ್ ಹಕ್ಕಾನಿ ಒಪ್ಪಂದ ಮಾಡಿಕೊಂಡ ಪ್ರಕಾರ, ಅಮೆರಿಕ ಸೇನೆ ಅಫ್ಘನ್ ಬಿಡುವ ತನಕ ಯಾವುದೇ ಮಹತ್ವದ ನಿರ್ಣಯ ಮಾಡಿಕೊಳ್ಳಬಾರದು. ಆಗಸ್ಟ್ 31ಕ್ಕೆ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಕರೆಯಿಸಿಕೊಳ್ಳಲಿದೆ. ಅದಾದ ಬಳಿಕವೇ ಅಫ್ಘನ್ನಲ್ಲಿ ಸರ್ಕಾರ ರಚನೆ ಅಥವಾ ಇನ್ನಿತರ ಮಹತ್ವದ ಬೆಳವಣಿಗೆಗಳು ನಡೆಯಲಿವೆ.
ಧಾರ್ವಿುಕ ಚಳವಳಿಯ ಸುಳಿವು?: ಅಮೆರಿಕ ಸೇನೆ ಅಫ್ಘನ್ ನೆಲ ಬಿಟ್ಟ ಬಳಿಕ, ಅಲ್ಲಿ ಧಾರ್ವಿುಕ ಚಳವಳಿ ನಡೆಯಬಹುದೇ ಎಂಬ ಸಂದೇಹ ಮೂಡಿದೆ. ಇದಕ್ಕೆ ಹಕ್ಕಾನಿ ಅವರ ಹೇಳಿಕೆಯೂ ಪುಷ್ಟಿ ನೀಡಿದೆ. ಆಫ್ಘನ್ ನ್ಯಾಷನಲ್ ಡಿಫೆನ್ಸ್ ಆಂಡ್ ಸೆಕ್ಯುರಿಟಿ ಫೋರ್ಸಸ್ ಜಾಗಕ್ಕೆ ತಾಲಿಬಾನ್ ಸೇನೆ ಬರಲಿದೆಯೇ? ಅಥವಾ ಅದನ್ನೇ ಮುಂದುವರಿಸುವುದೇ ಎಂಬುದು ಖಚಿತವಾಗಿಲ್ಲ. ಈ ನಡುವೆ, ಭವಿಷ್ಯದ ಸರ್ಕಾರ ರಚನೆ ವೇಳೆ ಎಲ್ಲರನ್ನೂ ಸೇರಿಸಿಕೊಳ್ಳಲಾಗುವುದು ಎಂಬ ಹೇಳಿಕೆಯನ್ನು ತಾಲಿಬಾನ್ ನೀಡಿದೆ. ಆದರೂ, ಅದು ಎಷ್ಟರಮಟ್ಟಿಗೆ ಈಡೇರಲಿದೆ ಎಂಬುದು ಸದ್ಯದ ಪ್ರಶ್ನೆ.
ತಾಲಿಬಾನ್ನ ಸವೋಚ್ಚ ನಾಯಕ ಎಲ್ಲಿ?: ತಾಲಿಬಾನ್ ಉಗ್ರ ಸಂಘಟನೆಯ ಸವೋನ್ನತ ನಾಯಕ ಹಯ್ಬತುಲ್ಲಾ ಅಖುನ್ಡ್ಝುದಾ ಇರುವಿಕೆಯ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಹಯ್ಬತುಲ್ಲಾ ಎಲ್ಲಿದಾನೆ ಎಂಬ ಪ್ರಶ್ನೆಗೆ ಪಾಕಿಸ್ತಾನ ಸೇನೆಯ ಕಸ್ಟಡಿಯಲ್ಲಿದ್ದಾನೆ ಎಂಬ ಉತ್ತರವೂ ಲಭ್ಯವಾಗಿದೆ. ಭಾರತದ ಉನ್ನತ ಮೂಲಗಳ ಪ್ರಕಾರ, ವಿದೇಶಿ ಗುಪ್ತಚರ ಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಹಯ್ಬತುಲ್ಲಾನನ್ನು ಪಾಕಿಸ್ತಾನ ಸೇನೆ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಇದೇ ಕಾರಣಕ್ಕೆ ಆತ ಕಳೆದ ಆರು ತಿಂಗಳಿಂದ ತಾಲಿಬಾನ್ನ ಹಿರಿಯ ನಾಯಕರೊಂದಿಗೆ ಕಾಣಿಸಿಕೊಂಡಿಲ್ಲ. ಕಳೆದ ಮೇ ತಿಂಗಳು ಸಾರ್ವಜನಿಕವಾಗಿ ಈದ್ ಉಲ್ ಫಿತ್ರ್ ಸಂದೇಶ ನೀಡಿದ್ದೇ ಕೊನೆ. ಆ ನಂತರ ಆತ ಬಹಿರಂಗವಾಗಿ ಕಾಣಿಸಿಲ್ಲ. ತಾಲಿಬಾನ್ ಮುಖ್ಯಸ್ಥರಾಗಿದ್ದ ಅಖ್ತರ್ ಮನ್ಸೂರ್ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾದ ಬಳಿಕ, 2016ರ ಮೇ ತಿಂಗಳಲ್ಲಿ ಹಯ್ಬತುಲ್ಲಾ ಮುಖ್ಯಸ್ಥರಾದ. ಹಯಬತುಲ್ಲಾ (50) ಕಾನೂನು ಪದವೀಧರ. ಆದರೆ ಯೋಧ ಅಲ್ಲ. ಅಲ್ ಕೈದಾದ ಅಮಿರ್ ಅಲ್ ಮುಮಿಮೀನ್ ಎಂದೇ ಗುರುತಿಸಿಕೊಂಡಿದ್ದ. ಅಫ್ಘನ್ನಲ್ಲಿ ಸರ್ಕಾರ ರಚಿಸುವಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಬಲ್ಲ ತಾಲಿಬಾನ್ನ ಏಳು ನಾಯಕರ ಪೈಕಿ ಒಬ್ಬ ಈ ಹಯ್ಬತುಲ್ಲಾ.
ಭಾರತದಲ್ಲಿ ತರಬೇತಿ ಪಡೆದಿದ್ದ ತಾಲಿಬಾನ್ ಕಮಾಂಡರ್ ಶೇರ್ ತಾಲಿಬಾನ್ನ ಏಳು ಪ್ರಮುಖ ನಾಯಕರ ಪೈಕಿ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ರೆೈ ಭಾರತದ ಡೆಹ್ರಾಡೂನ್ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ)ನಲ್ಲಿ 1982ರಲ್ಲಿ ಸೇನಾ ತರಬೇತಿ ಪಡೆದುಕೊಂಡಿದ್ದ. ಬ್ಯಾಚ್ವೆುೕಟ್ಗಳಿಂದ ಆತ ‘ಶೇರ್’ ಎಂದು ಕರೆಯಿಸಿಕೊಂಡಿದ್ದ. ಅಂದು ಅಕಾಡೆಮಿಯಲ್ಲಿ ಆತ 45 ವಿದೇಶಿ ಜಂಟಲ್ವೆುನ್ ಕೆಡೆಟ್ಗಳ ಪೈಕಿ ಒಬ್ಬನಾಗಿ ತರಬೇತಿಗೆ ಸೇರಿಕೊಂಡಿದ್ದ. ಭಗತ್ ಬೆಟಾಲಿಯನ್ನ ಕೆರೆನ್ ಕಂಪನಿಯಲ್ಲಿ ಕಲಿಕೆ ನಡೆದಿತ್ತು ಎಂಬ ಅಂಶವನ್ನು ನಿವೃತ್ತ ಮೇಜರ್ ಜನರಲ್ ಡಿಎ ಚತುರ್ವೆದಿ, ನಿವೃತ್ತ ಕರ್ನಲ್ ಕೇಸರ್ ಸಿಂಗ್ ಶೇಖಾವತ್ ನೆನಪಿಸಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಹೀಗೆ ತರಬೇತಿ ಪಡೆದ ಶೇರ್ 1996ರಲ್ಲಿ ಸೇನೆ ಬಿಟ್ಟು ಹೋಗಿ ತಾಲಿಬಾನ್ ಸೇರಿದ್ದ. ಬಳಿಕ ತಾಲಿಬಾನ್ಗೆ ರಾಜತಾಂತ್ರಿಕ ಮಾನ್ಯತೆ ಪಡೆಯಲು ವಾಷಿಂಗ್ಟನ್ಗೆ ತೆರಳಿದ್ದ. ಆಗ ಕ್ಲಿಂಟನ್ ಆಳ್ವಿಕೆ ಇತ್ತು. ಶೇರ್ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಅಬ್ದುಲ್ ಹಕೀಂ ಹಕ್ಕಾನಿ ಪರವಾಗಿ ಡೆಪ್ಯೂಟಿ ನೆಗೋಷಿಯೇಟರ್ ಆಗಿ ಕೆಲಸ ಮಾಡಿದ್ದ. ಆಂಗ್ಲ ಭಾಷೆ ಮೇಲಿನ ಹಿಡಿತ ಆತನಿಗೆ ಮಧ್ಯಸ್ಥಿಕೆದಾರನ ಪಾತ್ರವನ್ನು ಒದಗಿಸಿಕೊಟ್ಟಿತ್ತು.
2011ರಲ್ಲಿ ಅಮೆರಿಕ ಆರ್ವಿುಯ ಐಟಿ ವಿಭಾಗದಲ್ಲಿ ಕೆಲಸಕ್ಕೆ ಸೇರಿ 2021ರ ವರೆಗೆ ಅಫ್ಘನ್ನಲ್ಲಿ ಕೆಲಸ ಮಾಡಿದ್ದೆ. ಅಲ್ಲಿ ಇಂದು ಬದುಕಿದವರು ನಾಳೆ ಇರುತ್ತಾರೆ ಎಂಬುದು ಖಚಿತವಿರುವುದಿಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಅಫ್ಘನ್ ಸೇನೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಾಲಿಬಾನಿಗಳಿದ್ದಾರೆ. ಹೀಗಾಗಿ ಅವರನ್ನು ಮಣಿಸಲು ಸಾಧ್ಯವಾಗಲಿಲ್ಲ. ಕಾಬೂಲ್ ಏರ್ಪೋರ್ಟ್ಗೆ ಹೋಗುವ ದಾರಿಯಲ್ಲಿ 10ಕ್ಕೂ ಅಧಿಕ ತಾಲಿಬಾನ್ ಚೆಕ್ಪೋಸ್ಟ್ಗಳಿವೆ. ನನ್ನ ಜತೆಗೆಗಿದ್ದ ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಭಾರತೀಯರು ಎಂದರೆ ಅಫ್ಘನ್ ಪ್ರಜೆಗಳಿಗೆ ಗೌರವವಿದೆ.
| ಜಿನಿಲ್ ಜಾನ್ ಅಫ್ಘನ್ನಿಂದ ರಾಜ್ಯಕ್ಕೆ ಮರಳಿದವರು
ಭಾರತದ ರಾಯಭಾರ ಕಚೇರಿ ಲೂಟಿ: ಅಫ್ಘನ್ನಲ್ಲಿ ಗೊಂದಲ ಪರಿಸ್ಥಿತಿ ಮುಂದುವರಿದಿದೆ. ಕಂದಹಾರ್ ಮತ್ತು ಹೇರಾತ್ನಲ್ಲಿರುವ ಭಾರತದ ರಾಯಭಾರ ಕಚೇರಿಗಳಿಗೆ ನುಗ್ಗಿದ ತಾಲಿಬಾನಿಗಳ ಗುಂಪು ಅಲ್ಲಿ ಕಡತಗಳಿಗಾಗಿ ಶೋಧ ನಡೆಸಿದೆ. ಬಳಿಕ ಕಚೇರಿ ಆವರಣದಲ್ಲಿ ಪಾರ್ಕ್ ಮಾಡಿದ್ದ ಕಾರುಗಳನ್ನು ಕೊಂಡೊಯ್ದಿದ್ದಾರೆ. ಇಂತಹ ಕೃತ್ಯವನ್ನು ನಿರೀಕ್ಷಿಸಲಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಾಬುಲ್ನಲ್ಲಿ ರಾಜತಾಂತ್ರಿಕರನ್ನು ಇರಿಸಿ!: ಕಾಬುಲ್ನಲ್ಲಿರುವ ರಾಯಭಾರ ಕಚೇರಿಯಿಂದ ರಾಜತಾಂತ್ರಿಕ ಅಧಿಕಾರಿಗಳನ್ನು ಸ್ಥಳಾಂತರಿಸದಂತೆ ತಾಲಿಬಾನಿಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಕತಾರ್ನಲ್ಲಿರುವ ತಾಲಿಬಾನ್ ರಾಜಕೀಯ ಪಕ್ಷದ ಮುಖ್ಯಸ್ಥ ಅಬ್ಬಾಸ್ ಸ್ಟಾನಿಖ್ರೆೈ ಕಚೇರಿಯಿಂದ ಈ ಸಂವಹನ ನಡೆದಿತ್ತು.
ಚೀನಾದಲ್ಲಿ ಆಂತರಿಕ ವಿರೋಧ: ತಾಲಿಬಾನಿಗಳು ಅಫ್ಘನ್ ವಶಪಡಿಸಿ ಕೊಂಡಾಗ, ತಮಗೆ ಸೂಕ್ತ ಪಾಲುದಾರ ಎಂದು ಅವರನ್ನು ಸ್ವಾಗತಿಸಿದ ಚೀನಾ ಸರ್ಕಾರದ ಕ್ರಮಕ್ಕೆ ಆಂತರಿಕವಾಗಿ ವಿರೋಧ ವ್ಯಕ್ತವಾಗಿದೆ. ಚೀನಾಕ್ಕೆ ಬೆದರಿಕೆ ಯಾಗಿರುವ ಉಗ್ರ ಸಂಘಟನೆಯೊಂದಿಗೆ ತಾಲಿಬಾನಿಗಳ ಕೈ ಜೋಡಿಸಿಕೊಂಡಿದ್ದಾರೆ ಎಂಬುದನ್ನು ಸರ್ಕಾರ ಮರೆತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಅಫ್ಘನ್ ಪರಿಸ್ಥಿತಿ ಕಾಯಂ ಅಲ್ಲ!: ಅಫ್ಘನ್ ಪರಿಸ್ಥಿತಿ ಕಾಯಂ ಅಲ್ಲ. ಬದಲಾಗಲಿದೆ. ಭಯೋ ತ್ಪಾದನೆ ಕೆಲವು ಕಾಲವಷ್ಟೇ ಪ್ರಾಬಲ್ಯದಲ್ಲಿರಬಹುದು. ಆದರೆ, ಇದು ಕಾಯಂ ಆಗಿ ಇರಲಾರದು. ಮಾನವೀಯತೆಯನ್ನು ಅದು ಹೆಚ್ಚು ಕಾಲ ದಬ್ಬಾಳಿಕೆಗೊಳಪಡಿಸಲು ಸಾಧ್ಯವಿಲ್ಲವೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಕರೆನ್ಸಿ ಮೌಲ್ಯ ಶೇಕಡ 90 ಕುಸಿತ: ಅಫ್ಘನ್ ಕರೆನ್ಸಿಯ ಮೌಲ್ಯ ಶೇ 90 ಕುಸಿತ ಕಂಡಿದೆ. ಅಫ್ಘನ್ ಸೆಂಟ್ರಲ್ ಬ್ಯಾಂಕ್ ಬಳಿ ಹಣ ಇಲ್ಲ. ಅಮೆರಿಕದಲ್ಲಿ ಫೆಡರಲ್ ಬ್ಯಾಂಕ್ನಲ್ಲಿ ಇರಿಸಿದ ಹಣವನ್ನು ಸ್ತಂಭನಗೊಳಿಸಲಾಗಿದೆ.
ಬೆಂಗಳೂರು: ಆಫ್ಘನ್ನಲ್ಲಿ ಸಿಲುಕಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬ ನೋಡಲ್ ಅಧಿಕಾರಿ ಉಮೇಶ್ ಅವರಿಗೆ ಕರೆ ಮಾಡಿ ರಕ್ಷಣೆ ಕೋರಿದ್ದು, ಕೂಡಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಆಫ್ಘನ್ನಲ್ಲಿರುವ ವ್ಯಕ್ತಿಯನ್ನು ಕರೆತರುವ ವ್ಯವಸ್ಥೆಯಾಗಿದೆ. ಬೆಂಗಳೂರು ಮೂಲದ ಓರ್ವ ವ್ಯಕ್ತಿ ಹೆಲ್ಪ್ಲೈನ್ಗೆ ಕರೆ ಮಾಡಿ ಆಫ್ಘನ್ನಲ್ಲಿ ಸಿಲುಕಿರುವುದಾಗಿ ಹೇಳಿದ್ದರು. ಕೂಡಲೇ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಈಗಾಗಲೇ ಆ ವ್ಯಕ್ತಿಯನ್ನು ಕರೆ ತರುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ ಎಂದು ಉಮೇಶ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ. ಅಲ್ಲಿ ನೆಲೆಸಿರುವ ಕನ್ನಡಿಗರ ಸಂಖ್ಯೆ ವಿರಳವಾಗಿದೆ ಎಂದೂ ಅವರು ತಿಳಿಸಿದ್ದಾರೆ.
6 ಕನ್ನಡಿಗರ ಪರದಾಟ?: ಅಫ್ಘನ್ನಲ್ಲಿ ಸಿಲುಕಿರುವ ಕರ್ನಾಟಕ ಜನರ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈ ನಡುವೆ ತೀರ್ಥಹಳ್ಳಿಯ ರಾಬರ್ಟ್ ಕ್ಲೈವ್, ಬೆಂಗಳೂರಿನ ಅಶ್ವಥಿ, ಬೆಂ.ಮಾರತ್ಹಳ್ಳಿಯ ಹಿರೇಕನ್ ದೇವನಾಥ್, ಮಂಗಳೂರಿನ ವಿನ್ಸಂಟ್, ಜರೋನಾ ಸಿಕ್ವೇರಾ, ಬಳ್ಳಾರಿಯ ತನ್ವೀರ್ ಅವರು ಅಫ್ಘನ್ನಲ್ಲಿ ಕಾಬೂಲ್ ಏರ್ಪೋರ್ಟ್ಗೆ ಬರಲು ಪರದಾಡುತ್ತಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.
ಸಹಾಯಕ್ಕಾಗಿ ಸಂಪರ್ಕಿಸಿ: ದೂ: 080-22094498, 080-22942628, ಮೊ: 9480800187
ಇ-ಮೇಲ್: afghan_kar@ksp.gov.in
ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ವ್ಯವಸ್ಥೆ ಮಾಡಿದೆ. ರಾಜ್ಯದ ಎಷ್ಟು ಮಂದಿ ಅಫ್ಘನ್ನಲ್ಲಿ ಸಿಲುಕಿದ್ದಾರೆ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಸುರಕ್ಷಿತವಾಗಿ ಅವರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.
| ಆರಗ ಜ್ಞಾನೇಂದ್ರ ಗೃಹ ಸಚಿವ
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಕಡೆಯ ಭಾರತೀಯ ವ್ಯಕ್ತಿಯ ರಕ್ಷಣೆ ಮಾಡುವವರೆಗೂ ಸರ್ಕಾರದ ಕಾರ್ಯಾಚರಣೆ ಮುಂದುವರಿಯಲಿದೆ. ಕೆಲವೊಂದು ವಿಷಯಗಳನ್ನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ಭಾರತ ಸರ್ಕಾರ ಯಾವುದೇ ಬಾಹ್ಯ ಬೆದರಿಕೆಗೆ ಜಗ್ಗುವುದಿಲ್ಲ. ಕಳೆದ 7 ವರ್ಷಗಳಿಂದ ಗಡಿ ಪ್ರದೇಶ ಹೊರತುಪಡಿಸಿ ದೇಶದ ಬೇರೆಲ್ಲೂ ಭಯೋತ್ಪಾದನಾ ಚಟುವಟಿಕೆಗಳು ನಡೆದಿಲ್ಲ. ಯಾರೂ ಭಯಪಡುವ ಅವಶ್ಯಕತೆ ಇಲ್ಲ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ