

ಕೊಡಗು: 'ಜೀವನದಿ' ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ. ಸಾರ್ವಜನಿಕರೇ, ಪವಿತ್ರ ತೀರ್ಥ ಸ್ನಾನ ಮಾಡುವ ತವಕದಲ್ಲಿ ತಲಕಾವೇರಿಗೆ ಹೊರಡುವ ಮುನ್ನ ಇದನ್ನು ಗಮನಿಸಿ.
ಅ.17ರಂದು ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಅಂದು ತಲಕಾವೇರಿಗೆ ಹೊರಗಿನಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರಬೇಕು. ಟೆಸ್ಟ್ನ ವರದಿ ನೆಗೆಟಿವ್ ಎಂದಿದ್ದರಷ್ಟೇ ಒಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಹಾಗಾಗಿ ಆ ರಿಪೋರ್ಟ್ ಅನ್ನು ಜತೆಯಲ್ಲೇ ತರುವುದು ಕಡ್ಡಾಯ!
ಕಾವೇರಿ ತೀರ್ಥೋದ್ಭವ ವಿಚಾರವಾಗಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಸಚಿವ ವಿ. ಸೋಮಣ್ಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕರೊನಾ ಟೆಸ್ಟ್ ರಿಪೋರ್ಟ್ ನೋಡಿ ಭಕ್ತರನ್ನು ಒಳಗೆ ಬಿಡುತ್ತೇವೆ. ಹೆಚ್ಚು ಜನ ಸೇರಿದರೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಸರಳವಾಗಿ ಜಾತ್ರೆ ಆಚರಿಸಲಾಗುತ್ತಿದ್ದು, ತೀರ್ಥೋದ್ಭವ ವೇಳೆ ಕಡಿಮೆ ಜನರಿಗೆ ಅವಕಾಶ ನೀಡಲಾಗುವುದು. ಬ್ರಹ್ಮಕುಂಡಿಕೆ ಮುಂಭಾಗದ ಕಲ್ಯಾಣಿಯಲ್ಲಿ ತೀರ್ಥಸ್ನಾನ ನಿಷೇಧಿಸಲಾಗಿದೆ. ತೀರ್ಥೋದ್ಭವ ಬಳಿಕ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡುತ್ತಾರೆ ಎಂದು ವಿವರಿಸಿದರು.