

| ಪಂಕಜ ಕೆ.ಎಂ/ಬೇಲೂರು ಹರೀಶ ಬೆಂಗಳೂರು
ರಾಜ್ಯದಲ್ಲಿ ಸೋಮವಾರದಿಂದ (ಮಾ.1) ಬೇಸಿಗೆ ಶುರುವಾಗಿದೆ. ಈ ಬಾರಿ ಮೇ 31ರವರೆಗೆ ಬಿಸಿಲಿನ ಝುಳದ ಜತೆಗೆ ಹೆಚ್ಚಿನ ಗಾಳಿಯೂ ಸಹ ಇರಲಿದ್ದು, ಸಾಂಕ್ರಾಮಿಕ ರೋಗಗಳ ಜತೆಗೆ ಹೀಟ್ ಸ್ಟ್ರೋಕ್ (ಸನ್ಸ್ಟ್ರೋಕ್) ಭೀತಿ ಶುರುವಾಗಿದೆ.
ಒಣಹವೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಬಿಸಿಲು ಹೆಚ್ಚಳದಿಂದ ಮಳೆಯೂ ಕೂಡ ಬರಲಿದೆ. ಭೂಮಿ ಮೇಲಿರುವ ತೇವಾಂಶವೂ ದಿನದಿಂದ ದಿನಕ್ಕೆ ಕಡಿಮೆಯಾಗಿ ಗುಡುಗು ಮಿಂಚು ಸಹಿತ ಮಳೆಯಾಗುವುದಕ್ಕೂ ಕಾರಣವಾಗಲಿದೆ. ಉತ್ತರ ಕರ್ನಾಟಕ ಭಾಗದ ಚಿತ್ರದುರ್ಗ, ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಹೆಚ್ಚು ಬಿಸಿಲು ಇರಲಿದೆ. ಈ ಜಿಲ್ಲೆಗಳಲ್ಲಿ ಸದ್ಯಗರಿಷ್ಠ ತಾಪಮಾನದಲ್ಲಿ 35-38 ಡಿಗ್ರಿ ಸೆಲ್ಸಿಯಸ್ ಇದೆ. ಮುಂದಿನ ದಿನಗಳಿಂದ ಗರಿಷ್ಠ ತಾಪಮಾನದಲ್ಲಿ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದೆ. ಅಲ್ಲದೆ, ಏಪ್ರಿಲ್ ಹಾಗೂ ಮೇನಲ್ಲಿ 44 ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ.
ವಾತಾವರಣದಲ್ಲಿ ಒಣ ಹವೆ ಹೆಚ್ಚಿದೆ. ಇದರಿಂದ ಪರಿಸರದಲ್ಲಿ ಸಹವಾಗಿಯೇ ಉಷ್ಣಾಂಶ ಹೆಚ್ಚಳವಾಗಿ ನಾನಾ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಿದೆ. ಈ ಪೈಕಿ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಜನರನ್ನು ಹೆಚ್ಚು ಬಾಧಿಸಲಿದೆ. ಹಾಗಾಗಿ ಜನರು ತಾಜಾ ಹಾಗೂ ಹೆಚ್ಚು ದ್ರವಾಹಾರ ಸೇವಿಸಬೇಕು ಎನ್ನುತ್ತಾರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಡಾ.ನಿಜಗುಣ.
ಹೀಟ್ ಸ್ಟ್ರೋಕ್ ಎಂದರೇನು?: ಪರಿಸರದಲ್ಲಿ ತಾಪಮಾನ ಹೆಚ್ಚಾದಾಗ ಹೀಟ್ ಸ್ಟ್ರೋಕ್ (ಸನ್ ಸ್ಟ್ರೋಕ್) ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆ 99 ಡಿಗ್ರಿ ಸೆಲ್ಸಿಯಸ್ ಇರಬೇಕು. ವಾತಾವರಣದಲ್ಲಿ ತಾಪಮಾನ ಹೆಚ್ಚಳದಿಂದ ದೇಹದ ಉಷ್ಣತೆ 104ಕ್ಕಿಂತ ಹೆಚ್ಚಾದಾಗ ಉಷ್ಣತೆ ಕಡಿಮೆ ಮಾಡುವ ಮಿದುಳಿನ ಹೈಪೋತಲಮಸ್ (ದೇಹದ ಉಷ್ಣತೆ ನಿಯಂತ್ರಿಸುವ ಮಿದುಳಿನ ಅಂಶ) ನಿಯಂತ್ರಣ ತಪ್ಪಿ ಹಿಟ್ ಸ್ಟ್ರೋಕ್ ಉಂಟಾಗುತ್ತದೆ. ಇದರಿಂದ ಕೆಲವೊಮ್ಮೆ ಸಾವು ಸಹ ಸಂಭವಿಸುತ್ತದೆ.
ಹೀಟ್ ಸ್ಟ್ರೋಕ್ ಲಕ್ಷಣಗಳು: ಪದೇಪದೆ ತಲೆ ನೋವು, ತಲೆ ತಿರುಗುವಿಕೆ, ತಲೆ ಬಿಸಿಯಾಗುವುದು, ಒಣಗಿದ ಚರ್ಮ, ಹೆಚ್ಚಿದ ದೇಹದ ಉಷ್ಣತೆ, ವಾಕರಿಕೆ, ವಾಂತಿ, ನಿರ್ಜಲೀಕರಣ, ಸ್ನಾಯು ಸೆಳೆತ, ಸುಸ್ತು, ತೂಕ ಕಡಿಮೆ ಆಗುವುದು,ದೀರ್ಘಾವಧಿವರೆಗೆ ಮೂತ್ರ ವಿಸರ್ಜನೆ ಆಗದಿರುವುದು (ಇದು ದೇಹದಲ್ಲಿ ದ್ರವಾಂಶ ಇಲ್ಲ ಎಂಬುದನ್ನು ತಿಳಿಸುತ್ತದೆ) ಬೆವರು ಬರದಿರುವುದು (ಇದರಿಂದ ದೇಹದ ತಾಪಮಾನ ನಿಯಂತ್ರಿಸಲು ಆಗುವುದಿಲ್ಲ) ಪ್ರಜ್ಞೆ ಹೋಗುವುದು, ಮಾನಸಿಕ ಸಾಮರ್ಥ್ಯ ಕುಗ್ಗುವಿಕೆ.
ಆರೈಕೆ ಹೇಗೆ?: ಹೀಟ್ ಸ್ಟ್ರೋಕ್ಗೆ ಒಳಗಾದ ರೋಗಿಯನ್ನು ಕೂಡಲೇ ನೆರಳಿನಲ್ಲಿ ಅಥವಾ ತಂಪಾದ ಸ್ಥಳದಲ್ಲಿ ಕೂರಿಸಬೇಕು. ನೀರು ಕುಡಿಸಿ ಉಪಚರಿಸಬೇಕು. ತೀವ್ರ ತಲೆನೋವು, ತಲೆಸುತ್ತು, ತಲೆ ಬಿಸಿಯಾಗಿದ್ದರೆ ಹಣೆಯ ಮೇಲೆ ಒದ್ದೆ ಬಟ್ಟೆ ಹಾಕಬೇಕು. ತೇವದ ಬಟ್ಟೆಯಿಂದ ಮುಖ, ಮೈಯನ್ನು ಒರೆಯಬೇಕು. ವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು. ಇದರ ಜತೆಗೆ ಚರ್ಮದ ಆರೈಕೆಯೂ ಅತೀ ಮುಖ್ಯ ಎನ್ನುತ್ತಾರೆ ಇಎಸ್ಐ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ. ಗಿರೀಶ್.
ಯಾರು ಎಚ್ಚರ ವಹಿಸಬೇಕು?: ಬೇಸಿಗೆಯಲ್ಲಿ ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಅದರಲ್ಲೂ ಚಿಕ್ಕ ಮಕ್ಕಳು, 60 ವರ್ಷ ಮೇಲ್ಪಟ್ಟ ವೃದ್ಧರು,ರೋಗಿಗಳು, ದೀರ್ಘಕಾಲ ಔಷಧ ಸೇವಿಸುತ್ತಿರುವವರು, ಮಧುಮೇಹ, ಅಧಿಕ ರಕ್ತದ ಒತ್ತಡ, ಮೈಗ್ರೆನ್ ಸಮಸ್ಯೆ ಇರುವವರು, ಹೆಚ್ಚು ಕಾಲ ಬಿಸಿಲಿನಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಶಾಖದ ಸ್ಥಳಗಳಲ್ಲಿ ಕೆಲಸ ಮಾಡುವವರನ್ನು ಹೀಟ್ ಸ್ಟ್ರೋಕ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ದಿನದಿಂದ ದಿನಕ್ಕೆ ಸರಾಸರಿ 1-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ಆರಂಭದಲ್ಲಿ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನದಲ್ಲಿ 32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸೋಮವಾರ ಬೆಂಗಳೂರಿನಲ್ಲಿ 33.8 ಉಷ್ಣಾಂಶ ದಾಖಲಾಗಿದೆ. ಅಲ್ಲದೆ, ಕಳೆದ 3 ದಿನಗಳಿಂದ ತಾಪಮಾನದಲ್ಲಿ ಏರಿಳಿತವಾಗುತ್ತಿದ್ದು, ಏಪ್ರಿಲ್ನಲ್ಲಿ 37-38 ಉಷ್ಣಾಂಶ ದಾಖಲಾಗಲಿದೆ. ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಮೈಸೂರು, ಶಿವಮೊಗ್ಗ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಗರಿಷ್ಟ ತಾಪಮಾನದಲ್ಲಿ ಪ್ರಸ್ತುತ ಸರಾಸರಿ 31-34 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ಭಾಗಗಳಲ್ಲಿ ಏಪ್ರಿಲ್ನಲ್ಲಿ ಮತ್ತಷ್ಟು ಬಿಸಿಲು ಹೆಚ್ಚಿರಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.