

ಉಳ್ಳಾಲ: ಸಮಾಜದ ಅತ್ಯಂತ ಬಡವರಿಂದ ತೊಡಗಿ ಸಿರಿವಂತರವರೆಗೆ ಹುಟ್ಟಿನಿಂದ ಸಾವಿನವರೆಗೂ ದರ್ಜಿಗಳ ಅವಶ್ಯಕತೆ ಇದೆ. ಜಾತಿ, ಧರ್ಮದ ಹಂಗಿಲ್ಲದ ಇದೊಂದು ಪವಿತ್ರ ಉದ್ಯೋಗ ಎಂದು ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಉಳ್ಳಾಲ ಕ್ಷೇತ್ರ ಸಮಿತಿಯ 26ನೇ ವರ್ಷಾಚರಣೆ ಪ್ರಯುಕ್ತ ಭಾನುವಾರ ಪಜೀರ್ ಗೋವನಿತಾಶ್ರಯದಲ್ಲಿ ಗೋಶಾಲೆಯ ಗೋವುಗಳಿಗೆ ಗೋಗ್ರಾಸ, ಅಸಹಾಯಕರಿಗೆ ಸಹಾಯಹಸ್ತ ಮತ್ತು ಹಿರಿಯರಿಗೆ ಗೌರವ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಕೆಎಸ್ಟಿಎ ಜಿಲ್ಲಾಧ್ಯಕ್ಷೆ ವಿದ್ಯಾ ಶೆಟ್ಟಿ ಮಾತನಾಡಿ, ಟೈಲರ್ಸ್ ಅಸೋಸಿಯೇಷನ್ನಿಂದಾಗಿ ಹೆಣ್ಮಕ್ಕಳು ಮನೆಯಿಂದ ಹೊರಗೆ ಬರುವಂತಾಗಿದೆ. ಪರಸ್ಪರ ಪ್ರೀತಿಯ ವಾತಾವರಣ ಲಭಿಸುವಂತೆ ಮಾಡುವ ಸಂಘಟನೆಯನ್ನು ಪ್ರತಿಯೊಬ್ಬ ದರ್ಜಿಯೂ ಪ್ರೀತಿಸಬೇಕು ಎಂದರು.
ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ದನ ಗಟ್ಟಿ ಕನ್ನಿಮನೆ, ಹಿರಿಯ ದರ್ಜಿಗಳಾದ ಪುರುಷೋತ್ತಮ ಅಡ್ಕ, ಮೋನಪ್ಪ ಗಟ್ಟಿ ಪೆರ್ಮನ್ನೂರು, ಸುನೀತಾ ಆರ್.ಪ್ರಸಾದ್, ಸುಂದರ ಎನ್.ಎಸ್.ಮುಡಿಪು ಅವರನ್ನು ಗೌರವಿಸಲಾಯಿತು.
ಉಳ್ಳಾಲ ಕ್ಷೇತ್ರಾಧ್ಯಕ್ಷ ದೇವದಾಸ್ ಕೆರೆಬೈಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಸ್ಥಾಪಕ ಸದಸ್ಯರಾದ ವಸಂತ್ ಬಿ, ಕೋಶಾಧಿಕಾರಿ ಸತೀಶ್ ಅಮೀನ್, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮಲಾ, ಉಳ್ಳಾಲ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಜನಾರ್ದನ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕೋಶಾಧಿಕಾರಿ ಚಕ್ರೇಶ್ ಅಮೀನ್ ಸ್ವಾಗತಿಸಿದರು. ರಮೇಶ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂಚಲಾಕ್ಷಿ ವಂದಿಸಿದರು. ಮೋಹಿತ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.