

ದುಬೈ: 2021ರಲ್ಲಿ ಭಾರತ ಬದಲು ಆಸ್ಟ್ರೆಲಿಯಾದಲ್ಲೇ ಟಿ20 ವಿಶ್ವಕಪ್ ನಡೆದರೆ 2020ರ ಟೂರ್ನಿಗೆ ಖರೀದಿಸಿದ್ದ ಟಿಕೆಟ್ಗಳನ್ನೇ ಮಾನ್ಯ ಮಾಡಲಾಗುತ್ತಿದೆ. ಒಂದು ವೇಳೆ 2022ಕ್ಕೆ ಟೂರ್ನಿ ನಡೆಯುವಂತಾದರೆ ಸಂಪೂರ್ಣ ಮೊತ್ತ ವಾಪಸ್ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಿದೆ. ಕರೊನಾ ವೈರಸ್ ಭೀತಿಯಿಂದ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂನಿರ್ಯನ್ನು ಸೋಮವಾರ ಐಸಿಸಿ ಮುಂದೂಡಿದೆ. ಆದರೆ, 2021ರ ಟೂರ್ನಿ ಪೂರ್ವನಿಗದಿಯದಂತೆ ಭಾರತದಲ್ಲಿ ನಿಗದಿಯಾಗಿದೆ. ಆದರೆ, ಪ್ರಸಕ್ತ ವಿಶ್ವಕಪ್ ಮುಂದೂಡಿಕೆಯಾಗಿರುವುದರಿಂದ ಭಾರತ ಹಾಗೂ ಆಸ್ಟ್ರೆಲಿಯಾ ಎಂದು ಸ್ಥಳ ನಿಗದಿಯಾಗಿಲ್ಲ. ಈ ಕುರಿತು ಐಸಿಸಿ ಕೂಡ ಅಧಿಕೃತವಾಗಿ ಹೇಳಿಲ್ಲ.
ಇದನ್ನೂ ಓದಿ: 2 ವಾರಗಳಲ್ಲಿ ಮಹಿಳೆಯರ ವಿಶ್ವಕಪ್ ಭವಿಷ್ಯ ನಿರ್ಧಾರ
2020ರ ಟಿ20 ವಿಶ್ವಕಪ್ ಟೂರ್ನಿಯ ಬಹುತೇಕ ಟಿಕೆಟ್ಗಳು ಮಾರಾಟವಾಗಿದ್ದವು. 2021ರಲ್ಲಿ ಆಸ್ಟ್ರೆಲಿಯಾದಲ್ಲೇ ಟೂರ್ನಿ ನಡೆದರೆ, ಈ ವರ್ಷ ಖರೀದಿಸಿದ ಟಿಕೆಟ್ಗಳನ್ನು ಮಾನ್ಯಮಾಡಲಾಗುವುದು. ಒಂದು ವೇಳೆ 2022ಕ್ಕೆ ಮುಂದೂಡಿಕೆಯಾದರೆ ಸಂಪೂರ್ಣ ಹಣ ವಾಪಸ್ ನೀಡಲಾಗುವುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಟೂರ್ನಿಗೆ ಅಂತಿಮ ಸ್ಥಳ ನಿಗದಿಯಾಗುವವರೆಗೂ ಹಣ ವಾಪಸ್ ನೀಡಲಾಗುತ್ತಿದ್ದು, ಹಣ ವಾಪಸ್ ಪಡೆಯ ಬಯಸುವವರು ಡಿಸೆಂಬರ್ 15 ರವರೆಗೂ ಮನವಿ ಸಲ್ಲಿಸಬಹುದು, ಬಳಿಕ 30 ದಿನಗಳ ಒಳಗೆ ಆನ್ಲೈನ್ ಮೂಲಕ ಹಣವಾಪಸ್ ನೀಡಲಾಗುತ್ತದೆ. ಜತೆಗೆ ಹಾಸ್ಪಿಟಾಲಿಟಿ ಪ್ಯಾಕೇಜ್ ಕೂಡ 2021ರ ವೇಳಾಪಟ್ಟಿ ಪ್ರಕಟಿಸುವವರೆಗೂ ಇರಲಿದೆ.