ಯುವಿ ದಾಖಲೆ ಮುರಿದಿದ್ದರ ಬಗ್ಗೆ ನಿಮಗೆ ಏನನಿಸುತ್ತೆ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು...

Rohit
ರೋಹಿತ್​ ಶರ್ಮ ಮತ್ತು ಯುವರಾಜ್​ ಸಿಂಗ್​
Published on

ನವದೆಹಲಿ: ನಾಯಕನ ಜವಬ್ದಾರಿಯುತ ಆಟವಾಡಿದ ರೋಹಿತ್​ ಶರ್ಮಾ ನಿನ್ನೆ (ಅ. 27) ನೆದರ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿಗೆ ಕಾರಣರಾದವರಲ್ಲಿ ಒಬ್ಬರಾದರು. ಕೇವಲ 39 ಎಸೆತಗಳಲ್ಲಿ 53 ರನ್​ ಬಾರಿಸಿದ ರೋಹಿತ್​, ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ದಾಖಲೆಯನ್ನು ಮುರಿದಿದ್ದಾರೆ.

ಟೀಮ್​ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಸಾಲಿನಲ್ಲಿ ಯುವರಾಜ್​ ಸಿಂಗ್​ರನ್ನು ರೋಹಿತ್​ ಹಿಂದಿಕ್ಕಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ದಾಖಲೆ ಮುರಿದಿದ್ದರ ಬಗ್ಗೆ ಏನು ಅನಿಸುತ್ತದೆ ಎಂದು ರೋಹಿತ್​ರನ್ನು ಪ್ರಶ್ನಿಸಿದಾಗ, ಯುವರಾಜ್​ ಸಿಂಗ್​ಗೆ ಇದರಿಂದ ಸಂತೋಷವಾಗುವುದಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಟಿ20 ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲೇ 6 ಬಾಲ್​ಗೆ 6 ಸಿಕ್ಸರ್​ ಸಿಡಿಸುವ ಮೂಲಕ ಇಂದಿಗೂ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಯುವರಾಜ್​ ಉಳಿದುಕೊಂಡಿದ್ದಾರೆ. ಯಾರೂ ಮಾಡಿರದ ವಿಶೇಷ ದಾಖಲೆಯಾಗಿ ಉಳಿದುಕೊಂಡಿದೆ. ಆದರೆ, ರೋಹಿತ್​ ಯುವರಾಜ್​ ಹೆಸರಿನಲ್ಲಿ ಅತಿ ಹೆಚ್ಚು ಸಿಕ್ಸರ್​ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ನೆದರ್ಲೆಂಡ್​ ವಿರುದ್ಧ 4 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನಿಂದ 53 ರನ್​ ಗಳಿಸುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ವಿಶ್ವದ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಇದ್ದಾರೆ. ಗೇಲ್​ 63 ಸಿಕ್ಸರ್​ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 34 ಸಿಕ್ಸರ್​ನೊಂದಿಗೆ ರೋಹಿತ್​ ಎರಡನೇ ಸ್ಥಾನದಲ್ಲಿದ್ದಾರೆ. ಯುವರಾಜ್​ ಸಿಂಗ್​ 33 ಸಿಕ್ಸರ್​ ಬಾರಿಸಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಸಿಡ್ನಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ತಂಡ 56 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಟಿ-20 ವಿಶ್ವಕಪ್​ನಲ್ಲಿ ಸತತ 2ನೇ ಗೆಲುವು ದಾಖಲಿಸಿಕೊಂಡಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 180 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ನೆದರ್ಲೆಂಡ್​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 123 ರನ್​​ ಕಲೆಹಾಕಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net