

ನ್ಯೂಯಾರ್ಕ್: ವಿಶ್ವದ ಎಲ್ಲ ಟಿ20 ಟೂರ್ನಿಗಳ ಪೈಕಿ ವಿಜೇತ ತಂಡಕ್ಕೆ ಅತ್ಯಧಿಕ ಬಹುಮಾನ ಮೊತ್ತ ನೀಡುವ ಟೂರ್ನಿ ಎಂಬ ಹೆಗ್ಗಳಿಕೆ ಐಪಿಎಲ್ನದ್ದಾಗಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ಆ ಸಾಧನೆಯನ್ನು ಹಿಮ್ಮೆಟ್ಟಿಸಿದೆ. ಇತ್ತೀಚೆಗೆ 17ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್ ತಂಡ 20 ಕೋಟಿ ರೂ. ಬಹುಮಾನ ಪಡೆದಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯ ವಿಜೇತರು ಅದಕ್ಕಿಂತ 36 ಲಕ್ಷ ರೂ. ಅಧಿಕ ಪಡೆಯಲಿದ್ದಾರೆ.
ಹಾಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ವಿಜೇತ ತಂಡ ದಾಖಲೆಯ 20.36 ಕೋಟಿ ರೂ. (2.45 ದಶಲಕ್ಷ ಡಾಲರ್) ಬಹುಮಾನ ಮೊತ್ತವನ್ನು ಪಡೆಯಲಿದೆ ಎಂದು ಐಸಿಸಿ ಸೋಮವಾರ ಘೋಷಿಸಿದೆ. 93.51 ಕೋಟಿ ರೂ. (11.25 ದಶಲಕ್ಷ ಡಾಲರ್) ಟೂರ್ನಿಯ ಒಟ್ಟು ಬಹುಮಾನ ಮೊತ್ತವಾಗಿದ್ದು, ರನ್ನರ್ಅಪ್ ತಂಡ 10.64 ಕೋಟಿ ರೂ. (1.28 ದಶಲಕ್ಷ ಡಾಲರ್) ಬಹುಮಾನ ಪಡೆಯಲಿದೆ. ಸೆಮಿೈನಲ್ನಲ್ಲಿ ಸೋತ ಎರಡು ತಂಡಗಳು 6.54 ಕೋಟಿ ರೂ. (7,87,500 ಡಾಲರ್) ಬಹುಮಾನ ಪಡೆಯಲಿವೆ.
ಹಿಂದಿನ 2022ರ ಆವೃತ್ತಿಯಲ್ಲಿ ಒಟ್ಟು ಬಹುಮಾನ ಮೊತ್ತ 46.55 ಕೋಟಿ ರೂ. ಆಗಿದ್ದರೆ, ಈ ಬಾರಿ ದುಪ್ಪಟ್ಟು ಏರಿಕೆ ಮಾಡಲಾಗಿದೆ. 2022ರಲ್ಲಿ ವಿಜೇತ ಇಂಗ್ಲೆಂಡ್ ತಂಡ 13.30 ಕೋಟಿ ರೂ. ಪಡೆದಿತ್ತು.
ಸೂಪರ್-8 ಹಂತದಲ್ಲಿ ಹೊರಬೀಳುವ 4 ತಂಡಗಳು ತಲಾ 3.17 ಕೋಟಿ ರೂ. ಪಡೆಯಲಿವೆ. 9, 10, 11, 12ನೇ ಸ್ಥಾನಿ ತಂಡಗಳು ತಲಾ 2.05 ಕೋಟಿ ರೂ. ಮತ್ತು ಉಳಿದ 13ರಿಂದ 20ನೇ ಸ್ಥಾನ ಪಡೆವ ತಂಡಗಳು ತಲಾ 1.87 ಕೋಟಿ ರೂ. ಗಳಿಸಲಿವೆ.
ಇದಲ್ಲದೆ ಲೀಗ್ ಮತ್ತು ಸೂಪರ್-8 ಹಂತದಲ್ಲಿ ಪ್ರತಿ ಪಂದ್ಯದ ವಿಜೇತ ತಂಡ 25.89 ಲಕ್ಷ ರೂ. ಬಹುಮಾನ ಪಡೆಯಲಿವೆ. ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆ 20ಕ್ಕೆ ಏರಿರುವಂತೆಯೇ ಬಹುಮಾನ ಮೊತ್ತವೂ ದಾಖಲೆಯ ಏರಿಕೆ ಕಂಡಿದ್ದು, ಇದುವರೆಗಿನ ಅತ್ಯಧಿಕ ಬಹುಮಾನ ಮೊತ್ತದ ಟಿ20 ವಿಶ್ವಕಪ್ ಟೂರ್ನಿ ಇದಾಗಿದೆ ಎಂದು ಐಸಿಸಿ ತಿಳಿಸಿದೆ.