

ದುಬೈ: ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬಳಿಕ ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಇದೀಗ ಸ್ವತಃ ಗೌತಮ್ ಗಂಭೀರ್ ಕೂಡ ಈ ಹುದ್ದೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಅಬುಧಾಬಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ 42 ವರ್ಷದ ಗಂಭೀರ್, "ಭಾರತ ತಂಡದ ಕೋಚ್ ಆಗಲು ಇಷ್ಟಪಡುವೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ. ಅದು 140 ಕೋಟಿ ಭಾರತೀಯರನ್ನು ಪ್ರತಿನಿಧಿಸಿದಂತೆ' ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ನೊಂದಿಗೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಸಿಐ ನೀಡಿರುವ ಗಡುವು ಮೇ 27ರಂದೇ ಮುಗಿದಿದೆ. ಆದರೆ ಗಂಭೀರ್ ಅರ್ಜಿ ಸಲ್ಲಿಸಿರುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಮುನ್ನ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಗಂಭೀರ್ ಕೋಚ್ ಆಗುವುದನ್ನು ಬೆಂಬಲಿಸಿದ್ದರು. ಕೋಚ್ ಹುದ್ದೆಗೆ ಗಂಭೀರ್ ಉತ್ತಮ ಅಭ್ಯರ್ಥಿ ಎಂದು ಗಂಗೂಲಿ ಹೇಳಿದ್ದರು.