

ಹೊಸದಿಲ್ಲಿ: ಮುಂಬರುವ ಟಿ-20 ವಿಶ್ವಕಪ್ 2024ರ ಟೀಮ್ ಇಂಡಿಯಾ ವೇಳಾಪಟ್ಟಿ ಶುಕ್ರವಾರ ಘೋಷಣೆಯಾಗಿದೆ. ಆದರೆ ನಾಯಕನ ಪಟ್ಟ ಮಾತ್ರ ಯಾರಿಗೆ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡತೊಡಗಿದ್ದು, ಎಂದಿನಂತೆ ರೋಹಿತ್ ಶರ್ಮಾ ವಹಿಸಲಿದ್ದಾರಾ? ಅಥವಾ ಹಾರ್ದಿಕ್ ಪಾಂಡ್ಯ ಗಿಟ್ಟಿಸಿಕೊಳ್ಳಲಿದ್ದಾರಾ? ಎಂಬ ತೀವ್ರ ಗೊಂದಲ ಇದೀಗ ನೆಟ್ಟಿಗರಲ್ಲಿ ಮನೆಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಶುಕ್ರವಾರ, ಜನವರಿ 5ರಂದು ಟಿ-20 ವಿಶ್ವಕಪ್ 2024ರ ವೇಳಾಪಟ್ಟಿಯನ್ನು ಪ್ರಕಟಿಸಿತು. ಪ್ರತಿಷ್ಠಿತ ಪ್ರದರ್ಶನ ಕಾರ್ಯಕ್ರಮವು ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಜೂನ್ 1 ರಿಂದ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ನೀಡಿತು. ಟೀಮ್ ಇಂಡಿಯಾ ತನ್ನ T20 ವರ್ಲ್ಡ್ ಕಪ್ ಅಭಿಯಾನವನ್ನು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಕಿಕ್ಸ್ಟಾರ್ಟ್ ಮಾಡಲು ಸಜ್ಜಾಗಿದೆ.
ತದನಂತರ ಜೂನ್ 9ರಂದು ನ್ಯೂಯಾರ್ಕ್‌ನ ಹೊಸದಾಗಿ ನಿರ್ಮಿಸಲಾದ ಐಸೆನ್‌ಹೋವರ್ ಪಾರ್ಕ್‌ನಲ್ಲಿ ಬಹುಕಾಲದ ಎದುರಾಳಿಯಾದ ಪಾಕಿಸ್ತಾನದೊಂದಿಗೆ ಹಣಾಹಣಿ ನಡೆಸಲಿದೆ. ಮುಂದೆ ಜೂನ್ 15ರಂದು ಫ್ಲೋರಿಡಾದಲ್ಲಿ ಕೆನಡಾವನ್ನು ಎದುರಿಸುವ ಮೊದಲು ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ಅಮೆರಿಕಾ ಜತೆಗೆ ಪೈಪೋಟಿಗೆ ಇಳಿಯಲಿದೆ.
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಸದ್ಯ ಪ್ರಸಾರಕರು ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ, ಕಾತರ ಹೆಚ್ಚಿದ್ದು, ಎರಡು ತಂಡಗಳ ನಡುವಿನ ಪಂದ್ಯ ಎಷ್ಟು ರೋಚಕವಾಗಿರಲಿದೆ ಎಂಬ ಲೆಕ್ಕಾಚಾರಗಳು ಬಿರುಸಿನಿಂದ ಸಾಗಿದೆ. ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬೆಂಬಿಡದೆ ಕಾಡುತ್ತಿರುವ ಪ್ರಶ್ನೆಯಂದರೆ ಅದು 2024ರ ಟಿ-20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು? ಎಂದು.
ಈ ಬಗ್ಗೆ ನೆಟ್ಟಿಗರಲ್ಲಿ ತೀವ್ರ ಗೊಂದಲ ಮೂಡಿದ್ದು, ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಇರಲಿದ್ದಾರೆ ಎಂದು ಒಂದಷ್ಟು ಪೋಸ್ಟರ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ, ಮತ್ತೊಂದೆಡೆ ನಾಯಕನ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಫಿಕ್ಸ್ ಎಂ ಪೋಸ್ಟರ್ಗಳು ವ್ಯಾಪಕವಾಗಿ ವೈರಲ್ ಆಗಿವೆ. ಸದ್ಯ ಈ ಸಂಗತಿ ಇಬ್ಬರ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಫ್ಯಾನ್ಸ್ಗಳ ಮಧ್ಯೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಇದಕ್ಕೆ ಪುಷ್ಟಿಯಂತೆ ಬಿಸಿಸಿಐ ಟೀಂ ಇಂಡಿಯಾಗೆ ಪೂರ್ಣ ಸಮಯದ ಟಿ-20 ನಾಯಕನನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).