ಟಿ20 ಸರಣಿಯಲ್ಲಿ ಭಾರತದ ಮಹಿಳೆಯರ ಶುಭಾರಂಭ; ಆಸೀಸ್​ ಎದುರು ಮೊದಲ ಪಂದ್ಯದಲ್ಲಿ 9 ವಿಕೆಟ್​ ಜಯ

ind vs aus womens web
Published on

ಮುಂಬೈ: ಯುವ ವೇಗಿ ಟಿಟಾಸ್​ ಸಾಧು (17ಕ್ಕೆ 4) ಬಿಗಿ ಬೌಲಿಂಗ್​ ದಾಳಿ ಮತ್ತು ಆರಂಭಿಕರಾದ ಸ್ಮ$ತಿ ಮಂದನಾ (54 ರನ್​, 52 ಎಸೆತ, 7 ಬೌಂಡರಿ, 1 ಸಿಕ್ಸರ್​), ಶೆಾಲಿ ವರ್ಮ (64*ರನ್​, 44 ಎಸೆತ, 6 ಬೌಂಡರಿ, 3 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 9 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಹರ್ಮಾನ್​ಪ್ರೀತ್​ ಕೌರ್​ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಏಕದಿನ ಸರಣಿಯ ವೈಟ್​ವಾಷ್​ ಮುಖಭಂಗಕ್ಕೆ ಸೇಡು ತೀರಿಸುವ ನಿಟ್ಟಿನಲ್ಲಿ ಶುಭಾರಂಭ ಕಂಡಿದೆ.

ಡಾ. ಡಿವೈ ಪಾಟೀಲ್​ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್​ ಆರಂಭದಲ್ಲಿ 33 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ತತ್ತರಿಸಿತು. ನಂತರ ಎಲ್ಲಿಸ್​ ಪೆರ್ರಿ (37) ಮತ್ತು ಫೋಬ್​ ಲಿಚ್​ಫೀಲ್ಡ್​ (49) ಹೋರಾಟದ ನಡುವೆ 19.2 ಓವರ್​ಗಳಲ್ಲಿ 141 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸ್ಮ$ತಿ ಮಂದನಾ ಮತ್ತು ಶೆಫಾಲಿ ವರ್ಮ ಮೊದಲ ವಿಕೆಟ್​ಗೆ 93 ಎಸೆತಗಳಲ್ಲೇ 137 ರನ್​ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಅಂತಿಮವಾಗಿ ಭಾರತ 17.4 ಓವರ್​ಗಳಲ್ಲಿ 1 ವಿಕೆಟ್​ಗೆ 145 ರನ್​ ಪೇರಿಸಿ ಜಯದ ದಡ ಸೇರಿತು.

ಆಸ್ಟ್ರೆಲಿಯಾ: 19.2 ಓವರ್​ಗಳಲ್ಲಿ 141 (ಅಲಿಸ್ಸಾ ಹೀಲಿ 8, ಮೂನಿ 17, ಎಲ್ಲಿಸ್​ ಪೆರ್ರಿ 37, ಲಿಚ್​ಫೀಲ್ಡ್​ 49, ಸುದರ್​ಲ್ಯಾಂಡ್​ 12, ಟಿಟಾಸ್​ ಸಾಧು 17ಕ್ಕೆ 4, ಶ್ರೇಯಾಂಕಾ 19ಕ್ಕೆ 2, ದೀಪ್ತಿ ಶರ್ಮ 24ಕ್ಕೆ 2). ಭಾರತ: 17.4 ಓವರ್​ಗಳಲ್ಲಿ 1 ವಿಕೆಟ್​ಗೆ 145 (ಸ್ಮೃತಿ 54, ಶೆಫಾಲಿ 64*, ಜೆಮೀಮಾ 6*, ವರೆಹ್ಯಾಂ 20ಕ್ಕೆ 1).

2ನೇ ಟಿ20 ಪಂದ್ಯ

ಯಾವಾಗ: ಭಾನುವಾರ

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಪೋರ್ಟ್ಸ್​18

ಸ್ಮೃತಿ 3 ಸಾವಿರ ರನ್​ ಸಾಧನೆ

ಭಾರತದ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಮಹಿಳೆಯರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 3 ಸಾವಿರ ರನ್​ ಪೂರೈಸಿದ 2ನೇ ಭಾರತೀಯರೆನಿಸಿದರು. ಒಟ್ಟಾರೆಯಾಗಿ ಅವರು ವಿಶ್ವದ 6ನೇ ಸಾಧಕಿಯಾಗಿದ್ದಾರೆ. ಸ್ಮೃತಿ (3,041) ತಾನಾಡಿದ 126ನೇ ಪಂದ್ಯದಲ್ಲಿ ಈ ಮೈಲಿಗಲ್ಲು ನೆಟ್ಟರು. ಹರ್ಮಾನ್​ಪ್ರೀತ್​ ಕೌರ್​ (3,195) ಈ ಸಾಧನೆ ಮಾಡಿರುವ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net