

ನವದೆಹಲಿ: ಭಾರತದ ಮೂವರು ಆಟಗಾರರು 2023ರ ಸಾಲಿನ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ವಿಶೇಷವೆನಿಸಿದೆ. ತವರಿನ ವಿಶ್ವಕಪ್ನಲ್ಲಿ ಗರಿಷ್ಠ ರನ್ ಬಾರಿಸಿ ಸರಣಿಶ್ರೇಷ್ಠರೆನಿಸಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಗರಿಷ್ಠ ವಿಕೆಟ್ ಕಬಳಿಸಿದ ಮೊಹಮದ್ ಶಮಿ ಮತ್ತು ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ರನ್ಮಳೆ ಹರಿಸಿದ ಶುಭಮಾನ್ ಗಿಲ್ ಪ್ರಶಸ್ತಿ ರೇಸ್ನಲ್ಲಿದ್ದಾರೆ. ನ್ಯೂಜಿಲೆಂಡ್ನ ಡೆರಿಲ್ ಮಿಚೆಲ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 4ನೇ ಆಟಗಾರರಾಗಿದ್ದಾರೆ.
ಕೊಹ್ಲಿ 2023ರಲ್ಲಿ 27 ಏಕದಿನ ಪಂದ್ಯಗಳಲ್ಲಿ 1,377 ರನ್ ಸಿಡಿಸಿದ್ದಾರೆ. ಹಾಲಿ ವರ್ಷ 6 ಶತಕ ಸಿಡಿಸುವ ಮೂಲಕ ಅವರು ಏಕದಿನ ಕ್ರಿಕೆಟ್ನಲ್ಲಿ ಶತಕಗಳ ಅರ್ಧಶತಕವನ್ನೂ ಪೂರೈಸಿದ್ದಾರೆ. ವಿಶ್ವಕಪ್ನಲ್ಲಿ ಅವರು ಗರಿಷ್ಠ 765 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದರು.
ಅನುಭವಿ ವೇಗಿ ಮೊಹಮದ್ ಶಮಿ 2023ರಲ್ಲಿ ಆಡಿದ 19 ಏಕದಿನಗಳಲ್ಲಿ 43 ವಿಕೆಟ್ ಕಬಳಿಸಿದ್ದರು. ವಿಶ್ವಕಪ್ನಲ್ಲಿ ಮೊದಲ 4 ಪಂದ್ಯಗಳಿಗೆ ತಂಡದಿಂದ ಹೊರಗಿದ್ದ ಅವರು, ನಂತರ ಆಡಿದ ಏಳೇ ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದರು. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು 57 ರನ್ಗಳಿಗೆ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.
23 ವರ್ಷದ ಶುಭಮಾನ್ ಗಿಲ್ 2023ರಲ್ಲಿ ಆಡಿದ 29 ಏಕದಿನ ಪಂದ್ಯಗಳಲ್ಲಿ 1,584 ರನ್ ಸಿಡಿಸಿದ್ದರು. ಜತೆಗೆ 24 ಕ್ಯಾಚ್ ಕೂಡ ಹಿಡಿದಿದ್ದಾರೆ. 5 ಶತಕ ಸಿಡಿಸಿದ್ದರು. ಈ ಪೈಕಿ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಮಹಿಳೆಯರ ವಿಭಾಗದಲ್ಲಿ ಆಸ್ಟ್ರೆಲಿಯಾದ ಆಶ್ಲೆ ಗಾರ್ಡ್ನರ್, ಶ್ರೀಲಂಕಾದ ಚಾಮರಿ ಅಟಪಟ್ಟು, ಇಂಗ್ಲೆಂಡ್ನ ನಾಟ್ ಸೀವರ್&ಬ್ರಂಟ್ ಮತ್ತು ನ್ಯೂಜಿಲೆಂಡ್ನ ಅಮೆಲಿಯಾ ಕೆರ್ ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಡೆರಿಲ್ ಮಿಚೆಲ್ 2023ರಲ್ಲಿ ಆಡಿದ 26 ಏಕದಿನಗಳಲ್ಲಿ 1,204 ರನ್, 9 ವಿಕೆಟ್, 22 ಕ್ಯಾಚ್ನೊಂದಿಗೆ ಸರ್ವಾಂಗೀಣ ನಿರ್ವಹಣೆ ತೋರಿದ್ದಾರೆ.
ವರ್ಷದ ವಿವಿಧ ಪ್ರಶಸ್ತಿ ರೇಸ್ನಲ್ಲಿರುವವರಿಗೆ ಮತ ಚಲಾಯಿಸಲು ಐಸಿಸಿ ತನ್ನ ವೆಬ್ಸೈಟ್ನಲ್ಲಿ ಅಭಿಮಾನಿಗಳಿಗೂ ಅವಕಾಶ ಕಲ್ಪಿಸಿದೆ. ಐಸಿಸಿ ವರ್ಷದ ಟೆಸ್ಟ್ ಆಟಗಾರ ಮತ್ತು ಸರ್ ಗ್ಯಾರಿ ಸೋಬರ್ಸ್ ಟ್ರೋಫಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿರುವವರ ಹೆಸರನ್ನು ಐಸಿಸಿ ಶುಕ್ರವಾರ ಪ್ರಕಟಿಸಲಿದೆ. ಜನವರಿ ಕೊನೇ ವಾರ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ.