

ಟ್ರಿನಿಡಾಡ್: ವೆಸ್ಟ್ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್-1ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ಹೀನಾಯವಾಗಿ ಸೋತು ಮೆಗಾ ಟೂರ್ನಮೆಂಟ್ನಿಂದ ಹೊರಬಿದ್ದಿತು. ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಹರಿಣ ಪಡೆ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ.
ವೆಸ್ಟ್ಇಂಡೀಸ್ ಟ್ರಿನಿಡಾಡ್ನ ತರೌಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್-1 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಕೇವಲ 11.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕೆಳೆದುಕೊಂಡು 56 ರನ್ಗಳ ಅಲ್ಪ ಮೊತ್ತವನ್ನು ಕಲೆಹಾಕಿತು. ಆಫ್ಘಾನ್ ಪರ ಅಜ್ಮತುಲ್ಲಾ ಒಮರ್ಜಾಯ್ (10) ಎರಡಂಕಿ ರನ್ ಗಳಿಸಿದ್ದನ್ನು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಎರಡಂಕಿಯನ್ನು ದಾಟಲಿಲ್ಲ. ಇಡೀ ಬ್ಯಾಟಿಂಗ್ ವಿಭಾಗವೇ ವೈಫಲ್ಯ ಅನುಭವಿಸಿತು.
ದಕ್ಷಿಣ ಆಫ್ರಿಕಾ ವಿರುದ್ಧ ಬಿರುಸಿನ ಬೌಲಿಂಗ್ ದಾಳಿ ಮಾಡಿದ ಮ್ಯಾಕ್ರೋ ಜನಸೇನ್ ಮತ್ತು ಶಮ್ಸಿ ತಲಾ ಮೂರು ವಿಕೆಟ್ಗಳನ್ನು ಪಡೆದು ಮಿಂಚಿದರು. ಉಳಿದಂತೆ ರಬಾಡ ಮತ್ತು ನೋರ್ಟ್ಜೆ ತಲಾ ಎರಡು ವಿಕೆಟ್ ಪಡೆದರು. ಹರಿಣ ಪಡೆಯ ಸಮರ್ಥ ಬೌಲಿಂಗ್ ದಾಳಿಗೆ ಅಫ್ಘಾನ್ ಬ್ಯಾಟ್ಸ್ಮನ್ಗಳು ತರೆಗೆಲೆಗಳಂತೆ ಉದುರಿದರು.
ಆಫ್ಘಾನ್ ನೀಡಿದ 57 ರನ್ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 8.5 ಓವರ್ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 29 ಮತ್ತು ನಾಯಕ ಐಡೆನ್ ಮಕ್ರಾಮ್ 23 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಫ್ಘಾನ್ ಪರ ಫಜಲ್ಹಕ್ ಫಾರೂಕಿ ಒಂದು ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬ ಬೌಲರ್ ಕೂಡ ಹರಿಣ ಪಡೆಗೆ ಸವಾಲಾಗಲಿಲ್ಲ. ಅಂತಿಮವಾಗಿ ಅಫ್ಘಾನ್ ಪಡೆ ಆಫ್ರಿಕಾ ತಂಡಕ್ಕೆ ಸುಲಭ ತುತ್ತಾಯಿತು. (ಏಜೆನ್ಸೀಸ್)