ಟಿ20 ವಿಶ್ವಕಪ್​ನಲ್ಲಿ ವಿಶೇಷ ದಾಖಲೆ ಬರೆದ ಅಮೆರಿಕ: ಟೀಮ್​ ಇಂಡಿಯಾದಿಂದಲೂ ಇದು ಸಾಧ್ಯವಾಗಿಲ್ಲ!

America Cricket Team
Published on

ನ್ಯೂಯಾರ್ಕ್​: ಕ್ರಿಕೆಟ್​ ಶಿಶು ಅಮೆರಿಕ ಟಿ20 ವಿಶ್ವಕಪ್‌ನಲ್ಲಿ ಇತಿಹಾಸವನ್ನು ಸೃಷ್ಟಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಚುಟುಕು ವಿಶ್ವಕಪ್​ ಇತಿಹಾಸದಲ್ಲೇ ಬೃಹತ್​ ಸ್ಕೋರ್​ ಚೇಸ್​ ಮಾಡಿದ ಮೂರನೇ ತಂಡವೆಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ. ಡಲ್ಲಾಸ್‌ನಲ್ಲಿ ಭಾನುವಾರ (ಜೂ.02) ಬೆಳಗ್ಗೆ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಯುಎಸ್​ಐ ಐತಿಹಾಸಿಕ ಗೆಲುವು ದಾಖಲಿಸಿತು.

ಕೆನಡಾ ನೀಡಿದ 195 ರನ್‌ಗಳ ಗುರಿಯನ್ನು ಅಮೆರಿಕ 17.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಿಸಿತು. ಆಂಡ್ರಿಸ್ ಗೌಸ್ (65 ರನ್​ 46 ಎಸೆತ 7 ಬೌಂಡರಿ ಮತ್ತು 3 ಸಿಕ್ಸರ್​) ಮತ್ತು ಆ್ಯರನ್ ಜೋನ್ಸ್ (94 ರನ್​ 40 ಎಸೆತ 4 ಬೌಂಟರಿ, 10 ಸಿಕ್ಸರ್​) ಅಮೆರಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಚೇಸ್​ ಮಾಡಿದ ತಂಡಗಳಲ್ಲಿ ಇಂಗ್ಲೆಂಡ್​ ಮೊದಲ ಸ್ಥಾನದಲ್ಲಿದೆ. 2016ರ ಮಾರ್ಚ್​ ತಿಂಗಳಲ್ಲಿ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್​ 230 ರನ್​ ಚೇಸ್​ ಮಾಡಿತ್ತು. 2007ರಲ್ಲಿ ಜೋಹನ್ಸ್​ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 206 ರನ್‌ಗಳನ್ನು ಚೇಸ್​ ಮಾಡಿತ್ತು. ಇದೀಗ ಕೆನಡಾ ವಿರುದ್ಧ 195 ರನ್‌ಗಳ ಗುರಿಯನ್ನು ಅಮೆರಿಕ ಸುಲಭವಾಗಿ ಗುರಿಮುಟ್ಟಿದೆ. ಸದ್ಯ ಈ ದಾಖಲೆ ಟೀಮ್​ ಇಂಡಿಯಾದಿಂದಲೂ ಸಾಧ್ಯವಾಗಿಲ್ಲ.

ಪಂದ್ಯದ ವಿಚಾರಕ್ಕೆ ಬರುವುದಾರೆ, ಡಲ್ಲಾಸ್​ನ ಗ್ರ್ಯಾಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಕೆನೆಡಾ ನವನೀತ್​ ಧಳಿವಾಲ್​ (61 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್), ನಿಕೋಲಸ್​ ಕೀರ್ಟಾನ್​ (51 ರನ್, 31 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಬಲದಿಂದ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 194 ರನ್​ ಪೇರಿಸಿತ್ತು. ಬೃಹತ್​ ಗುರಿ ಬೆನ್ನತ್ತಿದ್ದ ಯುಎಸ್​ಎ ತಂಡವು ಆರನ್​ ಜೋನ್ಸ್​ (94 ರನ್, 40 ಎಸೆತ, 4 ಬೌಂಡರಿ, 10 ಸಿಕ್ಸರ್), ಆ್ಯಂಡ್ರಿಯಿಸ್ ಗೌಸ್​ (65 ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಫಲವಾಗಿ 17.4 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net