ದೇಶೀಯ ಟಿ20 ಟೂರ್ನಿಯಲ್ಲಿ ನಾಕೌಟ್​ ಹಂತಕ್ಕೇರಲು ಕರ್ನಾಟಕ ವಿಫಲ

kar web
Published on

ಡೆಹ್ರಾಡೂನ್​: ಏಷ್ಯನ್​ ಗೇಮ್ಸ್​ನಲ್ಲಿ ಪಾಲ್ಗೊಂಡ ಭಾರತ ತಂಡ ಮತ್ತು ವಿಶ್ವಕಪ್​ನಲ್ಲಿ ಆಡುತ್ತಿರುವ ನೆದರ್ಲೆಂಡ್​ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಕರ್ನಾಟಕ ತಂಡ, ಕೆಎಲ್​ ರಾಹುಲ್​ ಹೊರತಾಗಿ ಎಲ್ಲ ಪ್ರಮುಖ ಆಟಗಾರರ ಉಪಸ್ಥಿತಿಯ ನಡುವೆಯೂ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ನಾಕೌಟ್​ ಹಂತಕ್ಕೇರಲು ವಿಫಲವಾಗಿದೆ. ಆರಂಭಿಕ ದೇವದತ್​ ಪಡಿಕಲ್​ (59 ರನ್​, 40 ಎಸೆತ, 7 ಬೌಂಡರಿ, 2 ಸಿಕ್ಸರ್​) ಮತ್ತು ಕೆಎಲ್​ ಶ್ರೀಜಿತ್​ (67 ರನ್​, 38 ಎಸೆತ, 5 ಬೌಂಡರಿ, 4 ಸಿಕ್ಸರ್​) ಬಿರುಸಿನ ಅರ್ಧಶತಕದಿಂದ ತ್ರಿಪುರ ವಿರುದ್ಧ ರನ್​ಪ್ರವಾಹ ಹರಿಸಿದ ಕರ್ನಾಟಕ ತಂಡ ತನ್ನ 6ನೇ ಹಾಗೂ ಕೊನೇ ಲೀಗ್​ ಪಂದ್ಯದಲ್ಲಿ 68 ರನ್​ಗಳಿಂದ ಗೆಲುವು ಸಾಧಿಸಿದರೂ, ಕನಿಷ್ಠ ಪ್ರಿ ಕ್ವಾರ್ಟರ್​ಫೈನಲ್​ ಸ್ಥಾನ ಒಲಿಸಿಕೊಳ್ಳಲು ವಿಫಲವಾಯಿತು.

ಕರ್ನಾಟಕ ಮೊದಲು ಬ್ಯಾಟಿಂಗ್​ಗೆ ಇಳಿದು 7 ವಿಕೆಟ್​ಗೆ 224 ರನ್​ ಪೇರಿಸಿದರೆ, ತ್ರಿಪುರ 18.1 ಓವರ್​ಗಳಲ್ಲಿ 156 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು. ಆಡಿದ 6 ಪಂದ್ಯಗಳಲ್ಲಿ 3 ಜಯ, 2 ಸೋಲಿನ ಸಹಿತ 14 ಅಂಕ ಗಳಿಸಿದ ಕರ್ನಾಟಕ, ಇ ಗುಂಪಿನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಗುಂಪು ಹಂತದಲ್ಲಿ 3ನೇ ಸ್ಥಾನ ಪಡೆದ ತಂಡಗಳ ಪೈಕಿ ಉತ್ತರ ಪ್ರದೇಶ, ಗುಜರಾತ್​, ಅಸ್ಸಾಂ, ಬಂಗಾಳ ಪ್ರಿ ಕ್ವಾರ್ಟರ್​ಫೈನಲ್​ಗೇರಿದರೆ, ಪಂಜಾಬ್​, ವಿದರ್ಭ, ದೆಹಲಿ, ಮುಂಬೈ, ಬರೋಡ, ಕೇರಳ ನೇರವಾಗಿ ಕ್ವಾರ್ಟರ್​ಫೈನಲ್​ಗೇರಿದವು.

ಕರ್ನಾಟಕ: 7 ವಿಕೆಟ್​ಗೆ 224 (ಪಡಿಕಲ್​ 59, ಮಯಾಂಕ್​ 8, ಚೇತನ್​ 1, ಶ್ರೀಜಿತ್​ 68, ಅಭಿನವ್​ 40, ಬಿಆರ್​ ಶರತ್​ 26*, ಮುರಾ ಸಿಂಗ್​ 26ಕ್ಕೆ 2, ಸರ್ಕಾರ್​ 55ಕ್ಕೆ 2), ತ್ರಿಪುರ: 18.1 ಓವರ್​ಗಳಲ್ಲಿ 156 (ಬಿಕ್ರಮ್​ 38, ಗಣೇಶ್​ ಸತೀಶ್​ 9, ಮುರಾ ಸಿಂಗ್​ 56, ಪ್ರವಿಣ್​ ದುಬೆ 33ಕ್ಕೆ 3, ಪ್ರಸಿದ್ಧ ಕೃಷ್ಣ 31ಕ್ಕೆ 2, ಕೆ. ಗೌತಮ್​ 30ಕ್ಕೆ 2, ವೈಶಾಕ್​ 29ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net