

ಬೆಂಗಳೂರು: ಮಹಾರಾಷ್ಟ್ರದ ಈಜುತಾರೆಯರಾದ ವೀರ್ಧವಳ್ ಖಾಡೆ ಮತ್ತು ರುತುಜಾ ಖಾಡೆ ದೇಶದ ಪ್ರಮುಖ ಕ್ರೀಡಾ ದಂಪತಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಮದುವೆಯ ನಂತರವೂ ಈಜುಕೊಳದಲ್ಲಿ ಪದಕ ಬೇಟೆಯಾಡುವುದನ್ನು ಮುಂದುವರಿಸಿರುವ ವೀರ್ಧವಳ್ ಮತ್ತು ರುತುಜಾ ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದು ಮಿಂಚಿದ್ದಾರೆ.
ಮಂಗಳವಾರ ನಡೆದ ಈಜು ಸ್ಪರ್ಧೆಯ ಪುರುಷರ 50 ಮೀ. ಫ್ರೀಸ್ಟೈಲ್ನಲ್ಲಿ ಅನುಭವಿ ಈಜುಪಟು ವೀರ್ಧವಳ್ ಖಾಡೆ 22.82 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ನೂತನ ಕೂಟ ದಾಖಲೆ ರಚಿಸಿದರು. ಬಳಿಕ ಮಹಿಳೆಯರ 50 ಮೀ. ಫ್ರೀಸ್ಟೈಲ್ನಲ್ಲಿ ಪತ್ನಿ ರುತುಜಾ ಖಾಡೆ (26.42 ಸೆಕೆಂಡ್) ಕೂಡ ನೂತನ ಕೂಟದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು.
'ಇದು ನಮಗಿಬ್ಬರಿಗೂ ವಿಶೇಷವಾದ ಗೆಲುವಾಗಿದೆ. 2019ರಿಂದಲೂ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ ಪ್ರತಿಬಾರಿಯೂ ಮೊದಲ ಗೆಲುವಿನಂತೆ ಭಾಸವಾಗುತ್ತದೆ. ಈ ಬಾರಿ ಗೆಲುವಿನ ಜತೆಗೆ ಕೂಟ ದಾಖಲೆ ಬರೆದಿರುವುದು ಇನ್ನಷ್ಟು ವಿಶೇಷವೆನಿಸುತ್ತಿದೆ' ಎಂದು 27 ವರ್ಷದ ರುತುಜಾ ಖಾಡೆ ಹೇಳಿದ್ದಾರೆ.