ಬೆಂಗಳೂರಲ್ಲಿ ಸ್ವಪ್ನ-ಸಂದೀಪ್​ ಬಂಧನ; ಕೇರಳದಲ್ಲಿ ರಾಜಕೀಯ ತಲ್ಲಣ

swapna
Published on

ಕೋಳಿಕ್ಕೋಡ್​: ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಕ್ಕೆ ಒಳಗಾಗಿರುವ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ಕೋವಿಡ್​ ನಿರ್ಬಂಧದ ಹೊರತಾಗಿಯೂ ಕೇರಳದಿಂದ ಕರ್ನಾಟಕಕ್ಕೆ ತೆರಳಿದ ಸಂಗತಿ ಕೇರಳದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾಗಿದೆ.

ಕೋವಿಡ್​-19 ನಿರ್ಬಂಧದ ಹಿನ್ನೆಲೆಯಲ್ಲಿ ಕೇರಳದಿಂದ ಯಾರೊಬ್ಬರೂ ಹೊರಹೋಗುವಂತಿಲ್ಲ. ಅಂತೆಯೇ ಯಾರೊಬ್ಬರೂ ಒಳಬರುವಂತಿಲ್ಲ. ಇದರಿಂದಾಗಿ ಸಾಮಾನ್ಯ ಜನರ ಓಡಾಟಕ್ಕೆ ಭಾರಿ ತೊಂದರೆ ಉಂಟಾಗಿದೆ. ಆದರೆ, ಪ್ರಭಾವಿಗಳು ಮಾತ್ರ ಯಾವುದೇ ನಿರ್ಬಂಧದ ತಡೆ ಇಲ್ಲದೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಪ್ರಭಾವಿಗಳ ನೆರವಿಲ್ಲದೆ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ಕೇರಳ ಗಡಿಭಾಗದ ಚೆಕ್​ಪೋಸ್ಟ್​ಗಳನ್ನು ಅಷ್ಟು ಸುಲಭವಾಗಿ ದಾಟಿ ಕರ್ನಾಟಕಕ್ಕೆ ತೆರಳಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇರಳದಲ್ಲಿ ದಟ್ಟವಾಗಿವೆ.

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ರಮೇಶ್​ ಚೆನ್ನಿತಾಲಾ ಅವರು ಕೇರಳ ಪೊಲೀಸರ ನೆರವಿನಿಂದಲೇ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ರಾಜ್ಯವನ್ನು ಬಿಟ್ಟು ಹೋಗಿದ್ದಾಗಿ ಆರೋಪಿಸಿದ್ದರು. ಈ ಮಾಹಿತಿಯನ್ನು ಆಧಾರ ಸಮೇತವಾಗಿ ಬಹಿರಂಗಪಡಿಸುವುದಾಗಿ ಹೇಳಿದ್ದರು.

ತಿರುವನಂತಪುರದಲ್ಲಿ ಸರ್ಕಾರ ಟ್ರಿಪಲ್​ ಲಾಕ್​ಡೌನ್​ ಘೋಷಿಸಿದ ಸಂದರ್ಭದಲ್ಲಿ ಸ್ವಪ್ನ ಮತ್ತು ಸಂದೀಪ್​ ಅಲ್ಲಿಂದ ಹೊರಟಿದ್ದರು. ನೇರವಾಗಿ ಕೊಚ್ಚಿಗೆ ಹೋದ ಅವರು ಅಲ್ಲಿಂದ ಬೆಂಗಳೂರಿಗೆ ತೆರಳಿದ್ದರು. ಚಿನ್ನದ ಕಳ್ಳಸಾಗಣಿಕೆಯ ಹಗರಣ ಬಹಿರಂಗವಾಗುವ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದವರೊಂದಿಗೆ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net