

ರಾಮಕಿಶನ್ ಕೆ.ವಿ. ಬೆಂಗಳೂರು
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮಮಂದಿರ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ. ಈ ಮೂಲಕ ದೇಶಾದ್ಯಂತ ಇರುವ ರಾಮಭಕ್ತರು ಒಂದಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ 'ಸ್ವಗ್ರಾಮ ಫೌಂಡೇಷನ್' ವಿಭಿನ್ನವಾದ ಅಭಿಯಾನವೊಂದನ್ನು ಕೈಗೆತ್ತಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪ್ರತಿಯೊಂದು ಗ್ರಾಮದಲ್ಲಿಯೂ ಕುತೂಹಲ ಮೂಡಿಸುವಂತಹ ಸಂಗತಿಯೊಂದು ಇದ್ದೇ ಇರುತ್ತದೆ. ಅವುಗಳು ಸ್ಥಳಿಯ ಇತಿಹಾಸ, ಸಂಸತಿ, ಆಚರಣೆ, ಪದ್ಧತಿಯನ್ನು ತಿಳಿಸಿಕೊಡುತ್ತದೆ. ಇಂತಹ ವಿಚಾರಗಳು ಅಳಿದು ಹೋಗದೆ, ಮುಂದಿನ ತಲೆಮಾರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ 'ಸ್ವಗ್ರಾಮ ಫೌಂಡೇಷನ್' ಡಿಜಿಟಲ್ ರೂಪದಲ್ಲಿ ದಾಖಲೀಕರಣ ಮಾಡಿಕೊಂಡು ಬರುತ್ತಿದೆ.
ರಾಮನ ದೇವಸ್ಥಾನ, ವನವಾಸದ ಸಂದರ್ಭದಲ್ಲಿ ರಾಮ ಬಂದಿರುವ ಬಗ್ಗೆ ಕುರುಹು ಸೇರಿದಂತೆ, ರಾಮ ಎಂಬ ಹೆಸರಿನ ಜತೆಗೆ ಅನೇಕ ಐತಿಹಾಸಿಕ ಕಥೆಗಳು ಜನರಲ್ಲಿ ನಂಬಿಕೆಗಳಾಗಿ ಅಚ್ಚೊತ್ತಿವೆ. ಇಂದಿಗೂ ಎಲ್ಲೆಡೆ ರಾಮನ ಹೆಸರಿನಲ್ಲಿ ಅನೇಕ ಆಚರಣೆಗಳು ನಡೆಯುತ್ತಿವೆ. ಇಂತಹ ವಿಚಾರಗಳು ನಶಿಸಿ ಹೋಗಬಾರದು, ಇವೆಲ್ಲವೂ ದಾಖಲಾಗಿ ಮುಂದಿನ ತಲೆಮಾರಿಗೆ ತಲುಪಬೇಕು ಎಂದು ಉದ್ಧೇಶದೊಂದಿಗೆ 'ಸ್ವಗ್ರಾಮ ಫೌಂಡೇಷನ್' 'ನಮ್ಮೂರ ರಾಮ' ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಯಾರು ಬೇಕಾದರೂ ತಮ್ಮ ಊರಿನಲ್ಲಿರುವ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಪಟ್ಟ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಕಲೆ, ಸಂಪ್ರದಾಯ ವೈಶಿಷ್ಟ$್ಯಗಳನ್ನು ಆ್ಯಪ್ನಲ್ಲಿ ದಾಖಲೀಕರಣ ಮಾಡಬಹುದಾಗಿದೆ.
ಗೂಗಲ್ ಪ್ಲೇ-ಸ್ಟೋರ್ನಿಂದ 'ಸ್ವಗ್ರಾಮ' ಆ್ಯಪ್ನ್ನು ಡೌನ್ಲೋಡ್ ಮಾಡಬೇಕು. ಬಳಿಕ ಲಾಗಿನ್ ಆಗಿ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ದೇಶಾದ್ಯಂತ ಇರುವ ಮಾಹಿತಿಗಳನ್ನು ಅಪ್ಲೋಡ್ ಮಾಡುವಂತೆ ಆ್ಯಪ್ನ್ನು ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ಕರ್ನಾಟಕ್ಕೆ ಮಾತ್ರ ಸೀಮಿತವಾಗಿ ಮಾಹಿತಿಗಳನ್ನು ಅಪ್ಲೋಡ್ ಮಾಡಲು ಅವಕಾಶವಿದೆ.
ಬರಹ, ಫೋಟೋ ಹಾಗೂ ವಿಡಿಯೋ ರೂಪದಲ್ಲಿ ಮಾಹಿತಿ ಚಿತ್ರಣವನ್ನು ನೀಡಬಹುದಾಗಿದೆ. ಇದು ಫೇಸ್ಬುಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನರು ಕಮೆಂಟ್ ಮಾಡಬಹುದಾಗಿದೆ. ಒಂದು ವೇಳೆ ದಾಖಲಾಗಿರುವ ಮಾಹಿತಿಯಲ್ಲಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದಾದರೆ, ಅದನ್ನು ಸರಿಪಡಿಸಲು ಕೂಡ ಅವಕಾಶವಿದೆ. ಒಂದು ವೇಳೆ ಯಾರಾದರೂ ಅಶ್ಲೀಲ ಸಂಗತಿಗಳನ್ನು ಅಪ್ಲೋಡ್ ಮಾಡಿದರೆ, ಅದನ್ನು ರಿಪೋರ್ಟ್ ಮಾಡಬಹುದಾಗಿದೆ.
ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಸವಿವರವಾಗಿ ಎಲ್ಲೂ ದಾಖಲಾಗಿಲ್ಲ. ಜಾನಪದವಾಗಿ ಉಳಿದುಕೊಂಡಿರುವ ಐತಿಹ್ಯಗಳು ಮುಂದೊಂದು ದಿನ ನಶಸಿ ಹೋಗುವ ಸಾಧ್ಯತೆ ಇದೆ. ಪ್ರತಿಯೊಂದು ವಿಷಯವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಿದ್ದು, ಈ ಪ್ರಯತ್ನ ಭಾಗವಾಗಿ ನಮ್ಮೂರ ರಾಮ ಅಭಿಯಾನವನ್ನು ಕೈಗೊಂಡಿದ್ದೇವೆ.
-ಮಹೇಶ್, ಸ್ವಗ್ರಾಮ ಫೌಂಡೇಷನ್