

ಮುಂಬೈ : ಶಾರುಖ್ ಖಾನ್ ಜೊತೆ ಸ್ವದೇಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಗಾಯತ್ರಿ ಜೋಶಿ ಅವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ಸಂದರ್ಭದಲ್ಲಿ ಗಾಯತ್ರಿ ಅವರ ಪತಿ ವಿಕಾಸ್ ಒಬೆರಾಯ್ ಕೂಡ ಜೊತೆಗಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದಾಗ ಹಲವಾರು ವಾಹನಗಳು ಏಕಕಾಲಕ್ಕೆ ಡಿಕ್ಕಿ ಹೊಡೆದವು. ಇವುಗಳಲ್ಲಿ ಗಾಯತ್ರಿ ಮತ್ತು ವಿಕಾಸ್ ಅವರ ಕಾರು ಕೂಡ ಸೇರಿತ್ತು.
ಸ್ವದೇಸ್ ಖ್ಯಾತಿಯ ಗಾಯತ್ರಿ ಜೋಶಿ ತಮ್ಮ ಪತಿ ವಿಕಾಸ್ ಒಬೆರಾಯ್ ಅವರೊಂದಿಗೆ ಇಟಲಿಯಲ್ಲಿದ್ದಾರೆ. ಅಲ್ಲಿ ಅವರ ಕಾರು ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಗಾಯತ್ರಿ ಮತ್ತು ಅವರ ಪತಿ ಆರೋಗ್ಯವಾಗಿದ್ದಾರೆ, ಆದರೆ ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ವಿಸ್ ದಂಪತಿಗಳು ಸಾವನ್ನಪ್ಪಿದ್ದಾರೆ.
ಫೆರಾರಿಗೆ ಬೆಂಕಿ
ಈ ಅಪಘಾತದ ಬಗ್ಗೆ ಗಾಯತ್ರಿ ಜೋಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಾನು ಮತ್ತು ನನ್ನ ಪತಿ ಚೆನ್ನಾಗಿದ್ದೇವೆ ಎಂದು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಸಾರ್ಡಿನಿಯಾದಲ್ಲಿ ಹಲವಾರು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು, ನಂತರ ಸ್ವಿಸ್ ದಂಪತಿಗಳು ಪ್ರಯಾಣಿಸುತ್ತಿದ್ದ ಫೆರಾರಿಗೆ ಬೆಂಕಿ ಹತ್ತಿಕೊಂಡಿತು. ಪರಿಣಾಮ ಅಪಘಾತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಗಾಯತ್ರಿ ಜೋಶಿ ತಮ್ಮ ಯೋಗಕ್ಷೇಮದ ಬಗ್ಗೆ ಮಾತನಾಡಿ, “ವಿಕಾಸ್ ಮತ್ತು ನಾನು ಇಟಲಿಯಲ್ಲಿದ್ದೇವೆ. ನಮ್ಮ ಕಾರು ಅಪಘಾತಕ್ಕೀಡಾಯಿತು. ಆದರೆ ದೇವರ ದಯೆಯಿಂದ ನಾವಿಬ್ಬರೂ ಸಂಪೂರ್ಣವಾಗಿ ಚೆನ್ನಾಗಿದ್ದೇವೆ'' ಎಂದು ತಿಳಿಸಿದ್ದಾರೆ.
ಕಾರುಗಳು ಒಂದನ್ನೊಂದು ಹಿಂದಿಕ್ಕುತ್ತಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವರದಿಗಳ ಪ್ರಕಾರ, ಲಂಬೋರ್ಗಿನಿ ಮತ್ತು ಸ್ವಿಸ್ ದಂಪತಿಗಳ ಫೆರಾರಿ ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಾರುಗಳು ಡಿಕ್ಕಿ ಹೊಡೆದು ಫೆರಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ವ್ಯಾನ್ ಪಲ್ಟಿಯಾಗಿದೆ.
ಪ್ರವಾಸದ ವೇಳೆ ಅಪಘಾತ
ಅಪಘಾತಕ್ಕೆ ಸಂಬಂಧಿಸಿದಂತೆ, ಇದು ಸಾರ್ಡಿನಿಯಾ ಸೂಪರ್ಕಾರ್ ಪ್ರವಾಸದ ಸಮಯದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಪ್ರವಾಸದಲ್ಲಿ, ಟೆಯುಲಾಡಾದಿಂದ ಓಲ್ಬಿಯಾದವರೆಗೆ ಐಷಾರಾಮಿ ಕಾರುಗಳ ಮೆರವಣಿಗೆ ನಡೆಯಿತು. ಈ ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.