ಕಾಂಡೋಮ್​, ಚಾಕು, ಚೈನ್​... ಹೈಸ್ಕೂಲ್​ ವಿದ್ಯಾರ್ಥಿಗಳ ಬ್ಯಾಗ್​ ಚೆಕ್​ ಮಾಡಿದ ಶಿಕ್ಷಕರಿಗೆ ಕಾದಿತ್ತು ಶಾಕ್! School Bags ​

School Bags
Published on

School Bags : ಶಾಲಾ ತಪಾಸಣೆಯ ಸಮಯದಲ್ಲಿ ವಿದ್ಯಾರ್ಥಿಗಳಿಂದ ಕಾಂಡೋಮ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಮಹಾರಾಷ್ಟ್ರದ ನಾಸಿಕ್‌ನ ಘೋಟಿಯಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗ್‌ಗಳಿಂದ ಕಾಂಡೋಮ್‌ಗಳು, ಚಾಕುಗಳು, ಇಸ್ಪೀಟ್​ ಕಾರ್ಡ್​ಗಳು, ಸೈಕಲ್​ ಚೈನ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಕೆಲವು ವಿದ್ಯಾರ್ಥಿಗಳು ಶಾಲೆಯ ಯಾವುದೇ ನಿಯಮಗಳನ್ನು ಪಾಲಿಸದೆ ಶಾಲೆಗೆ ಬರುತ್ತಿದ್ದರು. ಹೀಗಾಗಿ ಶಿಕ್ಷಕರು ಯಾವುದೇ ಎಚ್ಚರಿಕೆಯನ್ನು ನೀಡದೆ ದಿಢೀರನೇ ತಪಾಸಣೆ ನಡೆಸಿದಾಗ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ನಿಷೇಧಿತ ವಸ್ತುಗಳು ಕಂಡುಬಂದಿವೆ. ಫೋಟೋ ಮತ್ತು ವಿಡಿಯೋಗಳನ್ನು ಪತ್ರಕರ್ತ ರಾಜ್ ಮಾಝಿ ಅವರು ತಮ್ಮ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮಕ್ಕಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಒಂದು ಮೇಜಿನ ಮೇಲೆ ಇಡಲಾಗಿದೆ.

ಈ ಘಟನೆ ಇದೀಗ ಶಾಲಾ ಮಕ್ಕಳ ಪಾಲಕರು ಮತ್ತು ಶಿಕ್ಷಕರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ. ಇದಕ್ಕೆಲ್ಲ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ವಿದ್ಯಾರ್ಥಿಗಳಿಂದ ಮಾದಕ ದ್ರವ್ಯಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳೂ ಇವೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರ ಮೇಲೆ ದಾಳಿ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿತ್ತು. ಕೆಲವು ವಿದ್ಯಾರ್ಥಿಗಳು ಮೊಬೈಲ್ ಫೋನ್ ತಂದಿದ್ದಾರೆ ಎಂಬ ಸುಳಿವು ಪಡೆದ ನಂತರ ಶಿಕ್ಷಕರು ದಾಳಿ ನಡೆಸಿದ್ದರು. ಈ ವೇಳೆ ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು, ಸಿಗರೇಟ್ ಮತ್ತು ಲೈಟರ್‌ಗಳು ಸಹ ಪತ್ತೆಯಾಗಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net