

ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳಾಗುತ್ತ ಬಂತು. ಈಗಲೂ ಅವರ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆ ವಿಚಾರಣೆ ಮುಂದುವರಿಸಿದರೆ, ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿತ್ಯ ಒಂದಿಲ್ಲೊಂದು ಹೇಳಿಕೆಯನ್ನು ನೀಡುತ್ತಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ವಿಸೆರಾ (ಹೊಟ್ಟೆ ಭಾಗದ) ವರದಿಯನ್ನು ನೀಡಿತ್ತು. ಇನ್ನೇನು ಉಗುರಿನ ವರದಿಗಾಗಿ ಎಲ್ಲರೂ ಕೌತುಕದಿಂದ ಕಾಯುತ್ತಿದ್ದರು. ಇದೀಗ ವಿಧಿ ವಿಜ್ಞಾನ ವಿಭಾಗದಿಂದ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ.
ಇದನ್ನೂ ಓದಿ: ಕನ್ನಡಕ್ಕೆ ಕೋಕಿಲ: ನಯನ ತಾರಾ ಪಾತ್ರದಲ್ಲಿ ರಚಿತಾ
ಹೌದು, ಸುಶಾಂತ್ ಜೂ. 14ರಂದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಇಡೀ ದೇಹವನ್ನು ಹಲವು ಪರೀಕ್ಷೆಗೆ ಒಳಪಡಿಸಿ, ಸಾವಿನ ಹಿನ್ನೆಲೆ ತಿಳಿದುಕೊಳ್ಳುವ ಸಲುವಾಗಿ ದಾಖಲೆಗಳನ್ನು ಕಲೆಹಾಕಲಾಗಿತ್ತು. ಹೀಗಿರುವಾಗಲೇ ಇದೀಗ ಫಾರೆನ್ಸಿಕ್ ವಿಭಾಗ ಸುಶಾಂತ್ ಅವರ ಉಗುರುಗಳ ಪರೀಕ್ಷೆಯನ್ನು ಮಾಡಿಲ್ಲವಂತೆ. ಅಷ್ಟೇ ಅಲ್ಲ ಅವುಗಳನ್ನು ಕಾಯ್ದಿರಿಸಿಲ್ಲ ಎಂಬ ವಿಚಾರ ಬಹಿರಂಗವಾಗಿದೆ.
ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೆ ಫಾರೆನ್ಸಿಕ್ ತಂಡ ಸುಶಾಂತ್ ವಾಸವಿದ್ದ ಮನೆಗೆ ತೆರಳಿತ್ತು. ಆದರೆ, ಅಲ್ಲಿ ಸುಶಾಂತ್ ಕೈಬೆರಳು ಮತ್ತು ಉಗುರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆದುಕೊಂಡಿಲ್ಲವಂತೆ. ಇಲ್ಲಿಯವರೆಗೂ ಇಡೀ ಪೊಲೀಸ್ ಇಲಾಖೆ ಸುಶಾಂತ್ ಅವರ ಉಗುರುಗಳ ವರದಿಗಾಗಿ ಕಾಯುತ್ತಿತ್ತು. ತನಿಖೆಗೆ ಅದೇ ಮೂಲ ಎಂದೇ ಹೇಳಲಾಗಿತ್ತು. ಇದೀಗ ಅದ್ಯಾವ ವರದಿಯನ್ನು ನಾವು ಪಡೆದಿಲ್ಲ ಎಂದು ಫಾರೆನ್ಸಿಕ್ ಸರ್ಜನ್ ಹೇಳಿದ್ದಾರೆ. ಈ ವಿಚಾರ ಅಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿನ ಹಿನ್ನೆಲೆ ಪತ್ತೆಗೆ ಮತ್ತಷ್ಟು ತೊಡಕುಟಾಂಗುವ ಸಾಧ್ಯತೆಗಳಿವೆ.
ಕಳೆದ ವಾರ ಮುಂಬೈನ ಬಾಂದ್ರಾ ಪೊಲೀಸ್ ಕೋರಿಕೆ ಮೇರೆಗೆ ಕಲಿನ್ ಫಾರೆನ್ಸಿಕ್ ಲ್ಯಾಬ್, ಸುಶಾಂತ್ ಅವರ ಕರುಳು ಸೇರಿ ಕೆಲ ಅಂಗಾಂಗಗಳ ಬಗ್ಗೆ ವಿಸ್ತ್ರತ ವರದಿ ನೀಡಿತ್ತು. ಉಸಿರುಗಟ್ಟುವಿಕೆಯಿಂದಲೇ ಜೀವ ಹೋಗಿದೆ ಎಂಬುದು ದೃಢಪಟ್ಟಿದ್ದು, ಈ ಹಿಂದಿನ ಹಲವು ಸಂದೇಹಗಳಿಗೆ ತೆರೆಬಿದ್ದಿತ್ತು. ಹಾಗಾಗಿ ವಿಸೆರಾ (ಒಳಾಂಗಗಳ) ವರದಿ ಬದಿಗಿಟ್ಟು ಬಾಕಿ ಉಳಿದ ಉಗುರಿನ ವರದಿಗಾಗಿ ಮುಂಬೈ ಪೊಲೀಸರು ಕಾಯುತ್ತಿದ್ದರು. (ಏಜೆನ್ಸೀಸ್)