ಬೆಂಗಳೂರು: ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ತೆಲುಗಿನ ‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದೀಗ ಅವರ ಆ ಸಿನಿಮಾ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಳ್ಳುತ್ತಿದೆ. ಇನ್ನು ಶೀರ್ಷಿಕೆ ಅಂತಿಮವಾಗದ ಆ ಚಿತ್ರವನ್ನು ಮಯೂರ ರಾಘವೇಂದ್ರ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ‘ಕನ್ನಡ್ ಗೊತ್ತಿಲ್ಲ’ ಚಿತ್ರವನ್ನು ನಿರ್ದೇಶಿಸಿರುವ ಮಯೂರ ರಾಘವೇಂದ್ರ, ಇದೀಗ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರದ ತಯಾರಿ ನಡೆಸಿದ್ದಾರೆ.
ಅಂದಹಾಗೆ, 2018ರಲ್ಲಿ ಕಾಲಿವುಡ್ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಕೊಲಮಾವು ಕೋಕಿಲ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಮೂಲ ಚಿತ್ರದಲ್ಲಿ ನಯನತಾರಾ ಮಾಡಿದ ಪಾತ್ರವನ್ನು ಮಾಡುವುದಕ್ಕೆ ರಚಿತಾ ರಾಮ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಚಿತಾ ಸದ್ಯ ನಾಯಕಿ ಪ್ರಧಾನ ಸಿನಿಮಾಗಳತ್ತ ಚಿತ್ತ ಹರಿಸಿದ್ದಾರೆ. ಅವರ ಸಿನಿಮಾ ಬತ್ತಳಿಕೆಯಲ್ಲಿ ಈಗಾಗಲೇ ‘ಲಿಲ್ಲಿ’, ‘ಏಪ್ರಿಲ್’ ಸಿನಿಮಾಗಳಿವೆ.
ಇದೀಗ ಅದೇ ಸಾಲಿಗೆ ಈ ಸಿನಿಮಾ ಸಹ ಸೇರಲಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಮಯೂರ ರಾಘವೇಂದ್ರ ಮಾಹಿತಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ‘ಇದೊಂದು ಸಸ್ಪನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ‘ಕನ್ನಡ್ ಗೊತ್ತಿಲ್ಲ’ ಬಳಿಕ ಅಂಥದ್ದೇ ಶೈಲಿಯನ್ನು ಆಯ್ದುಕೊಂಡಿದ್ದೇನೆ. ಈಗಾಗಲೇ ರಿಮೇಕ್ ರೈಟ್ಸ್ ಬಗ್ಗೆ ಆ ಚಿತ್ರತಂಡದ ಜತೆ ಮಾತನಾಡಿದ್ದೇವೆ’ ಎನ್ನುತ್ತಾರೆ ಮಯೂರ.