ಸುಶಾಂತ್​ ಸಿಂಗ್​ ರಜಪೂತ್​ ಅವರ ಕೊನೆಯ ಕ್ಷಣಗಳು ಹೀಗಿದ್ದವು...

sushant
Published on

ಮುಂಬೈ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ಅವರ ಕೊನೆಯ ಕ್ಷಣಗಳ ಬಗ್ಗೆ ನಿಖರವಾದ ಮಾಹಿತಿ ಹೊರಬಿದ್ದಿದೆ. ಇದರ ಪ್ರಕಾರ, ಬೆಳಗ್ಗೆ ಬೇಗನೆ ಎದ್ದಿದ್ದ ಸುಶಾಂತ್​ ಸಿಂಗ್​ ರಜಪೂತ್​, ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಕುರುಹು ತೋರಿರಲಿಲ್ಲ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ 6.30ಕ್ಕೆ ಎದ್ದಿದ್ದ ಅವರು ತಮ್ಮ ಬಾಣಸಿಗರಿಗೆ ಹೇಳಿ ಒಂದು ಗ್ಲಾಸ್​ ದಾಳಿಂಬೆ ಜ್ಯೂಸ್​ ಮಾಡಿಸಿಕೊಂಡು ಕುಡಿದಿದ್ದರು. ಬಳಿಕ ಅವರು ತಮ್ಮ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು.

ಇದಾಗಿ ಒಂದು ಗಂಟೆಯ ಬಳಿಕ ಉಪಹಾರಕ್ಕೆ ಏನು ಮಾಡಬೇಕು ಎಂದು ಕೇಳಲು ಅವರ ಕೋಣೆಯ ಬಾಗಿಲು ತಟ್ಟಿದ್ದರು. ಆದರೆ, ಅತ್ತಕಡೆಯಿಂದ ಉತ್ತರ ಬಂದಿರಲಿಲ್ಲ. ಇದರಿಂದ ಹೆದರಿದ ಆತ ನಿರಂತರವಾಗಿ ಬಾಗಿಲು ಬಡಿದು ಸುಶಾಂತ್​ ಜತೆ ಮಾತನಾಡಲು ಯತ್ನಿಸಿದ್ದ.

ಇಷ್ಟಾದರೂ ಬಾಗಿಲು ತೆಗೆಯದಿದ್ದಾಗ ಸುಶಾಂತ್​ ಅವರ ಕೋಣೆಯಲ್ಲಿದ್ದ ಅವರ ಗೆಳೆಯ ಕೂಡ ಬಾಗಿಲು ಬಡಿದಿದ್ದಲ್ಲದೆ, ಸುಶಾಂತ್​ ಅವರ ಮೊಬೈಲ್​ಗೆ ಕರೆ ಮಾಡಿದ್ದರು. ಆದರೂ ಸುಶಾಂತ್​ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಅವರು, ಮುಂಬೈನಲ್ಲೇ ಇದ್ದ ಸುಶಾಂತ್​ ಅವರ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಅವರು ಸುಶಾಂತ್​ ಮನೆಗೆ ಬಂದ ಬಳಿಕ ಬೀಗ ದುರಸ್ತಿ ಮಾಡುವವರನ್ನು ಕರೆಸಿ, ಬೀಗ ತೆಗೆಸಲಾಗಿತ್ತು. ಆಗ ಸುಶಾಂತ್​ ತಮ್ಮ ಕೋಣೆಯಲ್ಲಿದ್ದ ಫ್ಯಾನ್​ಗೆ ಬೆಡ್​ಶೀಟ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net