

ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರಿಂದ ತಮ್ಮ ಜೀವಕ್ಕೆ ಅಪಾಯ ಒದಗಬಹುದು ಎಂದು ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಈ ವರ್ಷದ ಫೆಬ್ರವತಿ 25ರಂದು ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಸದಸ್ಯರು ಸುಶಾಂತ್ ಅವರು ಒಳ್ಳೆಯವರೊಂದಿಗೆ ಒಡನಾಟ ಹೊಂದಿಲ್ಲ. ದಯವಿಟ್ಟು ಅವರಿಗೆ ಏನೂ ಆಪಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಸುಶಾಂತ್ ಸಂಪೂರ್ಣ ರಿಯಾ ಅವರ ಹಿಡಿತದಲ್ಲಿದ್ದರು ಎಂದು ಸುಶಾಂತ್ ಸಿಂಗ್ ರಜಪೂತ್ ಅವರು ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ.
ಈ ವಿಚಾರವಾಗಿ ನಾವು ರಿಯಾ ಅವರ ವಿರುದ್ಧ ದೂರು ಕೊಡಲು ಹೋದಾಗ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ, ಸಿಎಂ ನಿತೀಶ್ ಕುಮಾರ್ ಮಧ್ಯಪ್ರವೇಶಿಸಿದ ಬಳಿಕ ಎಫ್ಐಆರ್ ದಾಖಲಿಸಿಕೊಂಡಿದ್ದಾಗಿ ಹೇಳಿದ್ದಾರೆ.
ತಕ್ಷಣವೇ ಬಂಧಿಸಿ: ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟಿ ರಿಯಾ ಚಕ್ರವರ್ತಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ವಿಕಾಸ್ ಕುಮಾರ್ ಆಗ್ರಹಿಸಿದರು. ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಾತ್ರ ಸತ್ಯ ಹೊರಬರಲು ಸಾದ್ಯ ಎಂದು ಹೇಳಿದರು.
ರಿಯಾ ಅವರು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅವರ ಕುಟುಂಬದಿಂದ ದೂರ ಮಾಡಿದ್ದರು. ಕನಿಷ್ಠ ತಮ್ಮ ತಂದೆ ಅಥವಾ ತಮ್ಮ ಕುಟುಂಬದ ಸದಸ್ಯರ ಜತೆ ಮಾತನಾಡುವ ಸ್ವಾತಂತ್ರ್ಯವೂ ಅವರಿಗೆ ಇಲ್ಲವಾಗಿತ್ತು ಎಂದು ಪ್ರತಿಪಾದಿಸಿದರು.
ಮುಂಬೈ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಕಾಸ್ ಸಿಂಗ್, ಮುಂಬೈ ಪೊಲೀಸರು ಬೇರೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಆದರೆ, ಅವರು ಈ ವಿಷಯವಾಗಿ ರಿಯಾ ಚಕ್ರವರ್ತಿ ಅವರನ್ನು ತನಿಖೆಗೆ ಒಳಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಾವು ರಿಯಾ ವಿರುದ್ಧ ಪಟನಾದಲ್ಲಿ ದೂರು ದಾಖಲಿಸಬೇಕಾಯಿತು ಎಂದು ಸಮಜಾಯಿಷಿ ನೀಡಿದರು.