

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೂ ಮುನ್ನು ಏನು ಮಾಡುತ್ತಿದ್ದರು? ಏನು ಹುಡುಕುತ್ತಿದ್ದರು? ಯಾರೊಂದಿಗೆ ಮಾತನಾಡಿದ್ದರು? ಮುಂತಾದ ಹಲವು ವಿಷಯಗಳನ್ನು ಸಿಬಿಐ ಇದೀಗ ಕಲೆಹಾಕುತ್ತಿದೆ. ಹಾಗೆ ನೋಡಿದರೆ, ಇದಕ್ಕೂ ಮುನ್ನ ಮುಂಬೈ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಈ ವಿಷಯದಲ್ಲಿ ಮಾಹಿತಿಗಳನ್ನು ಕಲೆಹಾಕಿದ್ದರು.
ಪ್ರಮುಖವಾಗಿ, ಸುಶಾಂತ್ ಸಾವಿಗೂ ಸ್ವಲ್ಪ ಹೊತ್ತಿಗೆ ಮುನ್ನ ಅವರು, `ಪೇಯ್ನ್‍ಲೆಸ್ ಡೆಥ್' ಎಂಬ ವಿಷಯವನ್ನು ಗೂಗಲ್ ಮಾಡಿ ಹುಡುಕಿದ್ದರು ಎಂಬ ವಿಷಯವನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದರು. ಅಂದರೆ, ನೋವಾಗದೆ ಸಾಯುವುದು ಹೇಗೆ ಎಂದು ಸುಶಾಂತ್ ಅವರು ಹುಡುಕಿದ್ದರಿಂದ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಆದರೆ, ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಸುಶಾಂತ್ ಸಾಯುವ ಮುನ್ನ ಗೂಗಲ್ ಮಾಡಿದ್ದು `ಪೇಯ್ನ್‍ಲೆಸ್ ಡೆಥ್' ಎಂಬ ವಿಷಯವನ್ನಲ್ಲವಂತೆ. ಅದರ ಬದಲಿಗೆ ಅವರು ಕೇರಳ, ಕೊಡಗು ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರಾಪರ್ಟಿಗಳನ್ನು ಹುಡುಕುತ್ತಿದ್ದರಂತೆ. ಈ ಹಿಂದೆಯೂ ಸುಶಾಂತ್ ಅವರು ಕೊಡಗಿನಲ್ಲಿ ಪ್ರಾಪರ್ಟಿ ಖರೀದಿಸಬೇಕೆಂಬ ಆಸೆ ಹೊಂದಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಆದರೆ, ಕೆಲವು ಸಮಯದ ಮುಂಚೆಯೂ ಅವರು ಕೊಡಗು, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರಾಪರ್ಟಿ ಖರೀದಿಸುವುದಕ್ಕೆ ಎದುರು ನೋಡುತ್ತಿದ್ದರು ಎಂದರೆ, ಅವರದ್ದು ಆತ್ಮಹತ್ಯೆಯಾಗಿರಲಿಕ್ಕಿಲ್ಲ, ಕೊಲೆಯಾಗಿರಬಹುದಾದ ಚಾನ್ಸ್ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಸರಿಯಾಗಿ, ಸುಶಾಂತ್ ಅವರ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ಸಹ ಸುಶಾಂತ್ ಕೊಡಗಿನಲ್ಲಿ ಪ್ರಾಪರ್ಟಿ ಖರೀದಿಸುವುದಕ್ಕೆ ಯೋಚಿಸುತ್ತಿದ್ದರು ಮತ್ತು ಮುಂದೊಂದು ದಿನ ಅಲ್ಲೇ ಹೋಗಿ ನೆಲೆಗೊಳ್ಳುವುದಕ್ಕೆ ಯೋಚಿಸುತ್ತಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಈ ವಿಷಯವನ್ನು ಸಿಬಿಐನವರು ಗಂಭೀರವಾಗಿ ಪರಿಗಣಿಸುತ್ತಿದ್ದು, ಈ ವಿಚಾರವಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.