ವಿಶ್ವಕಪ್​ ಗೆದ್ದು ತವರಿಗೆ ಮರಳಿದ ಖುಷಿಯಲ್ಲಿ ಸೂರ್ಯಕುಮಾರ್​ ಮಸ್ತ್​ ಡಾನ್ಸ್​! ವಿಡಿಯೋ ವೈರಲ್​

Suryakumar
Published on

ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್‌ಗಳು ಇಂದು (ಜುಲೈ 04) ತವರಿಗೆ ಮರಳಿದ್ದಾರೆ. ಗುರುವಾರ ಬೆಳಗ್ಗೆ ನವದೆಹಲಿ ತಲುಪಿದ ಭಾರತೀಯ ಆಟಗಾರರಿಗೆ ಬಿಸಿಸಿಐ ಅಧಿಕಾರಿಗಳು ಮತ್ತು ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ವಿಶ್ವ ಚಾಂಪಿಯನ್‌ಗಳನ್ನು ಸ್ವಾಗತಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದ ಆಟಗಾರರನ್ನು ಹೆಮ್ಮೆಯಿಂದ ಸ್ವಾಗತಿಸಲಾಯಿತು. ಈ ವೇಳೆ ನಾಯಕ ರೋಹಿತ್​ ಶರ್ಮ ಕಪ್​ ಪ್ರದರ್ಶಿಸಿದರು ಮತ್ತು ವಿರಾಟ್​ ಕೊಹ್ಲಿ ಅಭಿಮಾನಿಗಳತ್ತ ಕೈಬೀಸಿದರು.

ವಿಮಾನ ನಿಲ್ದಾಣದಿಂದ ಟೀಮ್​ ಇಂಡಿಯಾ ಆಟಗಾರರು ಐಟಿಸಿ ಮೌರ್ಯ ಹೋಟೆಲ್​ಗೆ ತಲುಪಿದರು. ಹೋಟೆಲ್ ಬಳಿ ಬಂದಿಳಿದ ಆಟಗಾರರಿಗೆ ಚಪ್ಪಾಳೆ ತಟ್ಟುವ ಮೂಲಕ ಮತ್ತೆ ಭವ್ಯ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಡ್ರಮ್ ಬಾರಿಸುವ ಮೂಲಕ ಡ್ಯಾನ್ಸ್ ಮಾಡಿ, ಸಖತ್​ ಎಂಜಾಯ್​​ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೂರ್ಯಕುಮಾರ್​ ಅವರು ಡೋಲು ಬಾರಿಸಿ ಸಾಮೂಹಿಕ ನೃತ್ಯ ಮಾಡಿದರು. ಕಲಾವಿದರ ಜತೆಗೆ ಮಸ್ತ್​ ಸ್ಟೆಪ್ಸ್​ ಹಾಕಿದರು. ಈ ವೇಳೆ ಪಕ್ಕದಲ್ಲಿದ್ದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೂಡ ಸಾಥ್​ ನೀಡಿದರು. ಕುಣಿದು ಕುಪ್ಪಳಿಸಿರುವ ಸೂರ್ಯಕುಮಾರ್ ಅವರ ವಿಡಿಯೋ ಸದ್ಯ ವೈರಲ್​ ಆಗಿದೆ. ಸೂರ್ಯ ಅವರ ಡಾನ್ಸ್​ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್​ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರು ಅಪಾಯಕಾರಿ ಡೇವಿಡ್ ಮಿಲ್ಲರ್ ಸಿಕ್ಸರ್​ ಕಡೆ ಬಾರಿಸಿದ ಚೆಂಡನ್ನು ಅದ್ಭೂತವಾಗಿ ಹಿಡಿಯುವ ಮೂಲಕ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಸೋಲಿನ ದವಡೆಯಲ್ಲಿ ಸಿಲುಕಿದ್ದ ಪಂದ್ಯವನ್ನು ಯಾದವ್​ ಪಾರು ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net