ಹೆರಿಗೆ ನೋವಲ್ಲೂ ಲೈಂಗಿಕ ಕ್ರಿಯೆಗೆ ಒತ್ತಾಯ: ಚೆನ್ನೈ ಟೆಕ್ಕಿಯ ಕಾಂಡೋಮ್​ ಟ್ವೀಟ್​ಗೆ ಪತ್ನಿಯ ತಿರುಗುಬಾಣ! Prasanna-Divya case

Prasanna-Divya case
Published on

Prasanna-Divya case : ಚೆನ್ನೈ ಮೂಲದ ಟೆಕ್ ಬಿಲಿಯನೇರ್ ಮತ್ತು ರಿಪ್ಲಿಂಗ್ ಸಹ-ಸಂಸ್ಥಾಪಕ ಪ್ರಸನ್ನ ಶಂಕರ್ ಮತ್ತು ಅವರ ಪತ್ನಿ ದಿವ್ಯಾ ಶಶಿಧರ್​ ನಡುವಿನ ವಿವಾದವು ಸದ್ಯ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ತನ್ನ ಪತ್ನಿ ದಿವ್ಯಾ, ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಪ್ರಸನ್ನ ದೂರಿದರೆ, ತನ್ನ ಗಂಡ ಮಹಾ ಸುಳ್ಳುಗಾರ ಎಂದು ದಿವ್ಯಾ ಹೇಳಿದ್ದಾರೆ. ಸದ್ಯ ಇಬ್ಬರು ವಿಚ್ಛೇದನ, ಜೀವನಾಂಶ ಮತ್ತು ತಮ್ಮ ಮಗನ ಪಾಲನೆಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಅಂದಹಾಗೆ, ಪ್ರಸನ್ನ ಶಂಕರ್ ಮತ್ತು ದಿವ್ಯಾ ಮೊದಲ ಬಾರಿಗೆ 2007ರಲ್ಲಿ ಭೇಟಿಯಾದರು. ಬಳಿಕ 2013ರಲ್ಲಿ ವಿವಾಹವಾದರು. ಪ್ರಸನ್ನ ಶಂಕರ್ ಮತ್ತು ದಿವ್ಯಾ ನಡುವೆ ಕೆಲವು ಸಮಯದಿಂದ ಜಗಳಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಲಾಗಿದೆ. ದಿವ್ಯಾ ತನಗೆ ತಿಂಗಳಿಗೆ 9 ಕೋಟಿ ರೂ. ಜೀವನಾಂಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆದರೆ, ಈ ವಿಷಯ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಪ್ರಸನ್ನ ವಿರುದ್ಧ ದಿವ್ಯಾ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್‌ಗೆ ನೀಡಿದ ವೈಯಕ್ತಿಕ ಸಂದರ್ಶನದಲ್ಲಿ ಮಾತನಾಡುತ್ತಾ, ತನ್ನ ಪತಿ ತನ್ನನ್ನು ಲೈಂಗಿಕತೆಗಾಗಿ ಮಾತ್ರ ಬಳಸಿಕೊಂಡಿದ್ದಾನೆ. ನಾನು ಆತನ ಆಸೆಗಳನ್ನು ಪೂರೈಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದನು. ಹೆರಿಗೆಯ ಸಮಯದಲ್ಲಿ ನನಗೆ ನೋವುಂಟಾದಾಗಲೂ ಆತ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದನು. ಅವನು ವೇಶ್ಯೆಯರೊಂದಿಗೆ ಸಂಬಂಧ ಹೊಂದಿದ್ದಾನೆ. ನನ್ನ ಸ್ನಾನಗೃಹದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ನನ್ನ ಮೇಲೆ ಕಣ್ಣಿಡುತ್ತಿದ್ದನು. ನನ್ನ ದೈನಂದಿನ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಿದ್ದನು. ತನ್ನ ಸಂಪತ್ತಿನ ಮೇಲಿನ ತೆರಿಗೆಯನ್ನು ತಪ್ಪಿಸಲು ನನ್ನನ್ನು ಮತ್ತು ನನ್ನ ಮಗನನ್ನು ಬೇರೆ ದೇಶಕ್ಕೆ ಎಳೆದೊಯ್ದನು ಎಂದು ದೂರಿದ್ದಾರೆ.

ನಾನು ಅವನ ಜೊತೆ ಸೆಕ್ಸ್ ಮಾಡದಿದ್ದರೆ, ಹೊರಗೆ ಹೋಗಿ ಅದನ್ನು ಪಡೆಯಲು ಬಯಸುವುದಾಗಿ ಹೇಳುತ್ತಿದ್ದ. ಅಲ್ಲದೆ, ತನ್ನ ಸ್ನೇಹಿತರೊಂದಿಗೆ ಮಲಗಲು ನನ್ನ ಮೇಲೆ ಒತ್ತಡ ಹೇರುತ್ತಿದ್ದ. ಅನೂಪ್ ಜೊತೆಗಿನ ನನ್ನ ಸಂಬಂಧದ ಬಗ್ಗೆ ಪ್ರಸನ್ನ ಹೇಳಿದ್ದೆಲ್ಲವೂ ಕಟ್ಟುಕಥೆ. ಅವನೊಂದಿಗಿನ ನನ್ನ ಸಂಬಂಧ ಕೇವಲ ಲೈಂಗಿಕವಲ್ಲ, ಅದು ಕೇವಲ ಭಾವನಾತ್ಮಕ ಎಂದು ದಿವ್ಯಾ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಆದಾಗ್ಯೂ, ಅವರ ಪತಿ ಪ್ರಸನ್ನ ಶಂಕರ್, ದಿವ್ಯಾ ಮಾಡಿದ ಎಲ್ಲ ಆರೋಪಗಳನ್ನು ನಿರಾಕರಿಸಿದರು. ಸದ್ಯ ಅವರ ಪ್ರಕರಣವು ಪ್ರಸ್ತುತ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

XL ಸೈಜ್​ ಕಾಂಡೋಮ್​…

ಕೆಲವು ದಿನಗಳ ಹಿಂದೆ ಪ್ರಸನ್ನ ಶಂಕರ್, ತನ್ನ ಪತ್ನಿ ದಿವ್ಯಾ ಅನ್ಯ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಮೂಲಕ ತನಗೆ ಮೋಸ ಮಾಡಿದ್ದಾಳೆ ಎಂದು ಜಾಲತಾಣದಲ್ಲಿ ದೊಡ್ಡ ಬರಹದ ಮೂಲಕ ಸಾಕ್ಷ್ಯಗಳನ್ನು ಮುಂದಿಟ್ಟು ಆರೋಪಿಸಿದ್ದರು. ಅಲ್ಲದೆ, ದಿವ್ಯಾಳ ಕರ್ಮಕಾಂಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಟೆಕ್ಕಿಯ ಸರಣಿ ಎಕ್ಸ್​ (ಹಿಂದಿನ ಟ್ವಿಟರ್​) ಪೋಸ್ಟ್​ ಆ ಸಮಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ವಿರುದ್ಧವೇ ಅತ್ಯಾಚಾರ ಮತ್ತು ಮಗನನ್ನು ಅಪಹರಣದ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಶಂಕರ್ ದೂರಿದ್ದರು. ಈ ಕುರಿತು ಸುದೀರ್ಘವಾಗಿ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್​ನಲ್ಲಿ ಬರೆದುಕೊಂಡಿರುವ ಪ್ರಸನ್ನ ಶಂಕರ್, “2016ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ 10 ಬಿಲಿಯನ್ ಡಾಲರ್​ ಕಂಪನಿಯನ್ನು ನಾನು ಸ್ಥಾಪಿಸಿದೆ. 2020ರವರೆಗೆ ಅದರ ಸಿಟಿಓ (ಮುಖ್ಯ ತಂತ್ರಜ್ಞಾನ ಅಧಿಕಾರಿ) ಆಗಿ ಸೇವೆ ಸಲ್ಲಿಸಿದೆ. ಅದಾದ ನಂತರ, 2023ರಲ್ಲಿ, ಕ್ರಿಪ್ಟೋ ಉತ್ಸಾಹಿಗಳಿಗಾಗಿ 0xPPL ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸಿದೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತುತ ಭಾರತದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಹೆಂಡತಿಯ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದೇ ತಡ ಆಕೆ ನನ್ನ ವಿರುದ್ಧವೇ ಇದೀಗ ತಿರುಗಿ ಬಿದ್ದಿದ್ದಾಳೆ. ನಾನು ಅವಳ ಅನೈತಿಕ ಸಂಬಂಧ ಮತ್ತು ಇತರೆ ಮೋಸದ ಕೆಲಸಗಳನ್ನು ಬಯಲಿಗೆಳೆದು, ಆಕೆಯ ಅಸಲಿ ಬಣ್ಣವನ್ನು ಹೊರತಂದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಚೆನ್ನೈ ಪೊಲೀಸರ ಬಳಿ ಕಿರುಕುಳ, ಚಿತ್ರಹಿಂಸೆ ದೂರು ಸಲ್ಲಿಸಿದ್ದಾಳೆ. ಪತ್ನಿ ದಿವ್ಯ ಶಶಿಧರ್ ಮತ್ತು ಆಕೆಯ ಪ್ರೇಮಿ ಅನೂಪ್ ಕುಟ್ಟಿಶಂಕರನ್ ಮಧ್ಯೆ ಬಹಳ ದಿನಗಳಿಂದ ಅನೈತಿಕ ಸಂಬಂಧವಿದೆ. ಇದಕ್ಕೆ ಸಾಕ್ಷಿಗಳು ದಿವ್ಯ ಮಾಡಿರುವ ಮೆಸೇಜ್​ಗಳು. ಪುರಾವೆಯನ್ನು ಮುಂದಿಟ್ಟು ಮಾತನಾಡಬೇಕೆಂದು ಅದರ ಸ್ಕ್ರೀನ್‌ಶಾಟ್‌ಗಳನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದು ಎಕ್ಸ್​ ಹಾಗೂ ಲಿಂಕ್ಡ್​ಇನ್​ನಲ್ಲಿ ಪ್ರಸನ್ನ ಹಂಚಿಕೊಂಡಿದ್ದರು.

ದಿವ್ಯ ಪ್ರಿಯಕರ ಅನೂಪ್ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂಬುದಕ್ಕೆ ಅನೂಪ್​ ಪತ್ನಿ ನೀಡಿರುವ ಈ ಸಂದೇಶಗಳೇ ಸಾಕ್ಷಿ. ನನ್ನ ಪತ್ನಿ ಆತನಿಗೆ ಎಕ್ಸ್​ಎಲ್​ ಸೈಜ್​ನ ಕಾಂಡೋಮ್​ ತರಲು ಹೇಳಿದ್ದು, ಹೋಟೆಲ್​ನಲ್ಲಿ ಒಟ್ಟಿಗೆ ಸೇರಲು ರೂಮ್​ ಕೂಡ ಬುಕ್ಕಿಂಗ್ ಮಾಡಿದ್ದಳು. ಇಬ್ಬರ ಹೆಸರಿನಲ್ಲಿ ಬುಕ್ ಆದ ರೂಮ್​ ಸಂಖ್ಯೆ ಮತ್ತು ಹೆಸರನ್ನು ದಿವ್ಯ, ಅನೂಪ್​ಗೆ ಫೋಟೋ ಸಮೇತ ಕಳುಹಿಸಿದ್ದಳು. ಅದರ ಸಾಕ್ಷಿಯೇ ನಾನಿಲ್ಲಿ ಹಂಚಿಕೊಂಡಿದ್ದೇನೆ. ಈ ವಿಷಯ ನನಗೆ ಗೊತ್ತಾದ ಬಳಿಕ ಅನೂಪ್ ಅವರ ಪತ್ನಿ ನನ್ನ ಹೆಂಡತಿ ಮತ್ತು ಅನೂಪ್ ನಡುವಿನ ಸಂದೇಶಗಳ ಸ್ಕ್ರೀನ್​ಶಾಟ್​ಗಳನ್ನು ನನಗೆ ಕಳುಹಿಸಿದರು. ಇದೆಲ್ಲ ತಿಳಿಯುತ್ತಿದ್ದಂತೆ ನಾವಿಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿದೆವು. ಆ ಕುರಿತು ಜೀವನಾಂಶವಾಗಿ ನಾನೆಷ್ಟು ಹಣ ಕೊಡಬೇಕು ಎಂಬುದನ್ನು ಆಕೆಗೆ ತಿಳಿಸಿದ್ದೆ. ಇದಕ್ಕೆ ತಕರಾರು ತೆಗೆದ ದಿವ್ಯ, ನಾನು ಅವಳನ್ನು ಹೊಡೆದಿದ್ದೇನೆ ಎಂದು ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ನಕಲಿ ದೂರು ದಾಖಲಿಸಿದ್ದಾಳೆ. ಪ್ರಸ್ತುತ ಚೆನ್ನೈ ಪೊಲೀಸರು ನನ್ನನ್ನು ಸೆರೆಹಿಡಿಯಲು ಶೋಧ ಮುಂದುವರಿಸಿದ್ದಾರೆ. ನನ್ನ ಮಗನನ್ನ ಆಕೆಯಿಂದ ಕರೆದುಕೊಂಡು ಬರಲು ಸಹಾಯ ಮಾಡಿದ ಬೆಂಗಳೂರಿನ ಸ್ನೇಹಿತನನ್ನು ವಶಕ್ಕೆ ಪಡೆದು, ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನ ನನ್ನ ಸ್ನೇಹಿತನ ಮನೆಗೆ ನುಗ್ಗಿ, ಆತನನ್ನು ಠಾಣೆಗೆ ಎಳೆದುಕೊಂಡು ಬಂದಿರುವ ಪೊಲೀಸರು, ನನ್ನ ಬಗ್ಗೆ ಮಾಹಿತಿ ಕೊಡುವಂತೆ ಸ್ನೇಹಿತನಿಗೆ ಬೆದರಿಕೆ ಹಾಕಿದ್ದಾರೆ. ಯಾವುದೇ ಮಾಧ್ಯಮಗಳ ಮುಂದೆ ನಾನು ಏನ್ನನ್ನೂ ಹೇಳಬಾರದು ಎಂದು ಆಮಿಷಯೊಡ್ಡಿರುವ ಪೊಲೀಸರು, ನನ್ನ ಬಳಿ ಹೆಚ್ಚುವರಿ ಹಣವಿದೆ ಎಂಬ ಕಾರಣಕ್ಕೆ 25 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ ಎಂದು ಶಂಕರ್ ಅಳಲು ತೋಡಿಕೊಂಡಿದ್ದರು. ಇದರೊಟ್ಟಿಗೆ ನಾನು ಅವಳ ಮೇಲೆ ಅತ್ಯಾಚಾರ ಮಾಡಿದ್ದೇನೆ ಎಂದು ಮತ್ತಷ್ಟು ಸುಳ್ಳು ದೂರುಗಳನ್ನು ನೀಡಿದ್ದಾಳೆ. ನಾನು ಅವಳ ನಗ್ನ ವಿಡಿಯೊಗಳನ್ನು ಪ್ರಸಾರ ಮಾಡಿದೆ ಎಂದು ಈ ಹಿಂದೆ ಸಿಂಗಾಪುರದಲ್ಲಿ ದೂರು ಕೊಟ್ಟಿದ್ದಳು. ಪೊಲೀಸರು ಈ ಆರೋಪಗಳನ್ನು ತನಿಖೆ ಮಾಡಿದರು. ತನಿಖೆಯ ಬಳಿಕ ಅವುಗಳು ಆಧಾರರಹಿತವೆಂದು ಕಂಡುಕೊಂಡ ನಂತರವೇ ನನ್ನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದರು ಎಂದು ಶಂಕರ್ ಬರೆದಿದ್ದಾರೆ. ಸದ್ಯ ಶಂಕರ್​ ಟ್ವೀಟ್ ವೈರಲ್ ಆಗಿದ್ದೇ ತಡ ದಿವ್ಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೊದಲು ಜೀವನಾಂಶ ಕೇಳುವ ಕಾನೂನು ರದ್ದುಗೊಳಿಸಬೇಕು ಎಂಬ ಕೂಗಗಳು ವ್ಯಾಪಕವಾಗಿ ಸದ್ದು ಮಾಡಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net