

ಚೆನ್ನೈ, ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕಂಗುವ' ಚಿತ್ರೀಕರಣದ ಸೆಟ್ನಲ್ಲಿ ಅವಘಡವೊಂದು ಸಂಭವಿಸಿದ್ದು, ಬಿಲ್ಡ್-ಅಪ್ ಶಾಟ್ ವೇಳೆ ಕ್ಯಾಮರಾ ರೋಪ್ ನಟನ ಮೇಲೆ ದಿಢೀರ್ ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಸೂರ್ಯಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಸಿರುತೈ ಶಿವ ನಿರ್ದೇಶನದ 'ಕಂಗುವ' ಚಿತ್ರದ ಚಿತ್ರೀಕರಣವು ತಡರಾತ್ರಿ ಚೆನ್ನೈನಲ್ಲಿ ನಡೆಯುತ್ತಿತ್ತು. ಸೆಟ್ನಲ್ಲಿ ಸೂರ್ಯ ಅವರ ಬಿಲ್ಡ್-ಅಪ್ ಶಾಟ್ ಅನ್ನು ಸೆರೆಹಿಡಿಯುವಾಗ ಆಕಸ್ಮಿಕವಾಗಿ ಕ್ಯಾಮರಾ ರೋಪ್ವೊಂದು ಸೂರ್ಯ ಅವರ ಭುಜಕ್ಕೆ ಬಡಿದಿದೆ. ಅದೃಷ್ಟವಶಾತ್ ಗಂಭೀರ ಗಾಯಗಳಿಂದ ಬಚಾವ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಘಟನೆಯ ಬೆನ್ನಲ್ಲೇ ಚಿತ್ರತಂಡವು ಚಿತ್ರೀಕರಣವನ್ನು ಮುಂದೂಡಿದೆ.
ಘಟನೆಯ ಸುದ್ದಿ ಕೇಳಿದ ಸೂರ್ಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆತಂಕ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಟನ ಚೇತರಿಕೆಗೆ ಹಾರೈಸಿದ್ದಾರೆ ಮತ್ತು ಸೆಟ್ನಲ್ಲಿ ಹೆಚ್ಚು ಕಾಳಜಿ ವಹಿಸುವಂತೆ ವಿನಂತಿಸಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಚಿತ್ರವು 2024ರಂದು ತೆರೆಗೆ ಬರಲು ಸಿದ್ಧವಾಗುತ್ತಿದೆ,(ಏಜೆನ್ಸೀಸ್).