

ಬೆಳಗಾವಿ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮಗನ ಅಕಾಲಿಕ ನಿಧನದಿಂದ ತೀವ್ರ ದಿಗ್ಬ್ರಮೆಗೆ ಒಳಗಾಗಿರುವ ಅವರ ತಾಯಿ ಸೋಮವ್ವ ಅಂಗಡಿ, 'ನನ್ನ ಮಗ ಮನೆಗೆ ಬಂದೇ ಬರುತ್ತಾನೆ' ಎಂದು ಗೋಳಾಡಿದರು.
'ದೆಹಲಿಗೆ ಹೋಗಿ ಒಂದು ವಾರದಲ್ಲಿ ವಾಪಸ್ ಬರುತ್ತೇನೆ ಹುಷಾರಾಗಿರು ಎಂದು ಹೇಳಿ ಹೋಗಿದ್ದ ನನ್ನ ಮುದ್ದಿನ ಮಗ, ಇದೀಗ ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನನ್ನ ಮಗ ಎಲ್ಲಿಯೂ ಹೋಗಿಲ್ಲ. ವಾಪಸ್ ಬಂದೇ ಬರುತ್ತಾನೆ...' ಎಂದು ತಾಯಿ ಸೋಮವ್ವ ಕಣ್ಣೀರಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸುರೇಶ ಅಂಗಡಿ ವಿಧಿವಶರಾದ ಸುದ್ದಿಯನ್ನು ಗುರುವಾರ ಬೆಳಗ್ಗೆ ಅವರ ತಾಯಿಗೆ ತಿಳಿಸಲಾಯಿತು. ಈ ಸುದ್ದಿ ಕೇಳುತ್ತಿದ್ದಂತೆ ಕಣ್ಣೀರಾದ ತಾಯಿ, 'ನನ್ನ ಮಗ ಮನೆಗೆ ಬಂದೇ ಬರುತ್ತಾನೆ..' ಎನ್ನುತ್ತ ಆಕ್ರಂದಿಸಿದರು. ಇದನ್ನೂ ಓದಿರಿ ಮಣ್ಣಲ್ಲಿ ಮಣ್ಣಾದ ಸುರೇಶ್ ಅಂಗಡಿ
ಸಿಬ್ಬಂದಿ ಅನಾಥರು: 'ಕಳೆದ 20 ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿರುವ ನೆಮ್ಮೆಲ್ಲರನ್ನೂ ಸುರೇಶ್ ಅಂಗಡಿ ಅವರು ಮಕ್ಕಳಂತೆ ಪ್ರೀತಿಸುತ್ತಿದ್ದರು. ಕಾಳಜಿ ವಹಿಸುತ್ತಿದ್ದರು. ಸುಖ-ದುಃಖಗಳಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಅವರ ನಿಧನದಿಂದ ತಂದೆಯನ್ನೇ ಕಳೆದುಕೊಂಡಂತಾಗಿದೆ. ಸೆ.10ರಂದು ನಾನೇ ಸಾಂಬ್ರಾವರೆಗೆ ಹೋಗಿ ಬಿಟ್ಟು ಬಂದಿದ್ದೆ. ಅವತ್ತು ನಗುವಿನ ಮುಖವನ್ನು ನೋಡಿದ್ದೇ ನನ್ನ ಪಾಲಿಗೆ ಕೊನೆಯದಾಯಿತು' ಎಂದು ಕಾರು ಚಾಲಕ ಮುದಕಪ್ಪ ನಾಯಕ ಕಂಬನಿ ಮಿಡಿದರು.
'ಸುರೇಶ್ ಅಂಗಡಿ ಪತ್ನಿ ಮಂಗಳಾ ಮೇಡಂ ಅವರ ಕಾರನ್ನು ನಾನೇ ಚಲಾಯಿಸುತ್ತಿದ್ದೆ. ಸೆ.10ರಂದು ದೆಹಲಿಗೆ ಹೋಗುವಾಗ ಭೇಟಿ ಆಗಿದ್ದೆ. ಸೆ.16ರಂದು ಮೇಡಂ ಕೂಡ ದೆಹಲಿಗೆ ಹೋದರು. ಆಗ ನಾನೇ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದೆ' ಎಂದ ಇನ್ನೋರ್ವ ಚಾಲಕ ಸತೀಶ ಹಸಬೆ ದುಃಖಿತನಾದರು.