

ನವದೆಹಲಿ: ನೀಟ್ ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಜುಲೈ 8ರೊಳಗೆ ಉತ್ತರಿಸಲು ಸೂಚಿಸಿದೆ.
ವೈದ್ಯಕೀಯ ಪ್ರವೇಶ ಆಕಾಂಕ್ಷಿಗಳು ಮತ್ತು ಅವರ ಪಾಲಕರ ಪ್ರತಿಭಟನೆಯ ನಡುವೆ ಸಣ್ಣ ನಿರ್ಲಕ್ಷ್ಯವನ್ನು ಸಹ ಸಂಪೂರ್ಣವಾಗಿ ವ್ಯವಹರಿಸಬೇಕು. 0.001ರಷ್ಟು ನಿರ್ಲಕ್ಷ್ಯ ಯಾರದ್ದಾದರೂ ಇದ್ದರೆ ಅದನ್ನು ನಿಭಾಯಿಸಬೇಕು. ದೇಶದ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗೆ ಸಿದ್ಧರಾಗಲು ವೈದ್ಯಕೀಯ ಆಕಾಂಕ್ಷಿಗಳು ಮಾಡಿದ ಶ್ರಮವನ್ನು ಮರೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನೀಟ್ ಯುಜಿ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಪ್ರತಿಕೂಲ ದಾವೆ ಎಂದು ಪರಿಗಣಿಸಬೇಡಿ ಎಂದು ಕೇಂದ್ರ ಮತ್ತು ಎನ್ಟಿಎಗೆ ಹೇಳಿರುವ ಸುಪ್ರೀಂಕೋರ್ಟ್, ಪರೀಕ್ಷೆಯನ್ನು ನಡೆಸುವಲ್ಲಿ ಯಾವುದೇ ತಪ್ಪನ್ನು ಸ್ವೀಕರಿಸಲು ಮತ್ತು ಸರಿಪಡಿಸಲು ಎರಡೂ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅರ್ಜಿ ಸಲ್ಲಿಸಿದ್ದು, ಜುಲೈ 8ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಬೇಡಿಕೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಸುಮಾರು ಹನ್ನೆರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ. (ಏಜೆನ್ಸೀಸ್)