

ಲಖನೌ: ಈದ್-ಉಲ್-ಅಝಾ ಮತ್ತು ಗಂಗಾ ದಸರಾದ ಹಿನ್ನೆಲೆಯಲ್ಲಿ ಬುಧವಾರದವರೆಗೆ(ಜೂನ್ 19) ನೋಯ್ಡಾದಲ್ಲಿ ಸಿಆರ್ಪಿಸಿಯ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಆದೇಶ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಹಬ್ಬಹರಿದಿನಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಮಾಜ ವಿರೋಧಿ ಶಕ್ತಿಗಳಿಂದ ಸಾರ್ವಜನಿಕ ಸುವ್ಯವಸ್ಥೆಗೆ ಉಂಟಾಗುವ ಅಪಾಯದ ದೃಷ್ಟಿಯಿಂದ, ಅಂತಹ ವ್ಯಕ್ತಿಗಳು ಶಾಂತಿ ಕದಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪೊಲೀಸ್ ಆದೇಶದ ಪ್ರಕಾರ ವಿಶೇಷ ಅನುಮತಿ ಪಡೆಯದ ಹೊರತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಪೂಜೆ, ಮೆರವಣಿಗೆಗಳು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಆದೇಶದ ಉಲ್ಲಂಘನೆಯು ಸೆಕ್ಷನ್ 188ರ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ.
ಸಮಾಜಘಾತುಕರಿಂದ ಶಾಂತಿ ಕದಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಹಿರ್ದೇಶ್ ಕಥೇರಿಯಾ ತಿಳಿಸಿದ್ದಾರೆ. ವಿವಿಧ ಗುಂಪುಗಳ ಪ್ರತಿಭಟನೆಯ ಅಪಾಯಗಳನ್ನು ಹಾಗೂ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುವ ಯಾವುದೇ ಚಟುವಟಿಕೆಯನ್ನು ನಿಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತೆರೆದ ಪ್ರದೇಶಗಳಲ್ಲಿ ಅಥವಾ ಮೇಲ್ಛಾವಣಿಗಳಲ್ಲಿ ಇಟ್ಟಿಗೆಗಳು, ಕಲ್ಲುಗಳು, ಸೋಡಾ ಬಾಟಲಿಗಳು, ದಹಿಸುವ ವಸ್ತುಗಳು ಅಥವಾ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವುದನ್ನು ಹಾಗೂ ಪ್ರಮುಖ ನಿರ್ಬಂಧಗಳಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)