E20 ಇಂಧನ ನೀತಿ ವಿರುದ್ಧ ಪಿಐಎಲ್;​ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​ | E20 Petrol

ವಿಜಯವಾಣಿ (10)
Published on

E20 Petrol Policy: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿತು. ಗ್ರಾಹಕರಿಗೆ ತಿಳಿಸದೆ ಅಥವಾ ಯಾವುದೇ ಪರ್ಯಾಯ ಮಾರ್ಗ ನೀಡದೆ ದೇಶಾದ್ಯಂತ ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP-20) ಕಡ್ಡಾಯ ಪೂರೈಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದೆ.

ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ, ಆ ವಾಹನಗಳ ಇಂಜಿನ್‌ಗಳು ಖಂಡಿತವಾಗಿಯೂ ಹಾನಿಗೊಳಗಾಗುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸೋಮವಾರ (ಸೆ.01) ಈ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್​, E20 ಅಥವಾ ಎಥೆನಾಲ್ ಮಿಶ್ರಣ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ವಿಚಾರಣೆಯಲ್ಲಿ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಶಾದನ್ ಫರಾಸತ್, ಮಿಶ್ರಿತ ಪೆಟ್ರೋಲ್‌ನಲ್ಲಿ ಚಲಿಸುವ ಹಳೆಯ ವಾಹನಗಳಿಗೆ ಅಂದರೆ ನಿರ್ದಿಷ್ಟವಾಗಿ 2023ರ ಮೊದಲು ತಯಾರಿಸಿದ ವಾಹನಗಳಲ್ಲಿ ಶೇ.6ರಷ್ಟು ಕಡಿಮೆ ಇಂಧನ ದಕ್ಷತೆಯನ್ನು ತೋರಿಸಿದೆ ಎಂದು 2021ರ ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿ, ಕಳವಳ ವ್ಯಕ್ತಪಡಿಸಿದರು.

"ನಮಗೆ ಒಂದು ಆಯ್ಕೆಯನ್ನು ಕೊಡಬೇಕು. ಇಲ್ಲಿ ನಾವು E20 ಅನ್ನು ವಿರೋಧಿಸುವುದಿಲ್ಲ. ಆದರೆ, ಕನಿಷ್ಠ ಕೆಲವು ವಾಹನಗಳು ಅದೇ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಪೂರೈಕೆದಾರರು ನಮಗೆ ತಿಳಿಸಲಿ. ಏಪ್ರಿಲ್ 2023ರ ನಂತರ ತಯಾರಾದ ವಾಹನಗಳು ಮಾತ್ರ ಇದನ್ನು ಸಹಿಸಿಕೊಳ್ಳಲು ಯೋಗ್ಯವಾಗಿವೆ" ಎಂದು ವಾದ ಮಂಡಿಸಿದರು.

ಅರ್ಜಿಯನ್ನು ವಿರೋಧಿಸಿದ ಕೇಂದ್ರ ಸರ್ಕಾರವು, ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಗಣಿಸಿದ ನಂತರವೇ ಈ ನೀತಿಯನ್ನು ರೂಪಿಸಲಾಗಿದೆ ಎಂದು ತಿಳಿಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಈ ಅರ್ಜಿಯನ್ನು ವಜಾಗೊಳಿಸಿತು.

ಪಿಐಎಲ್‌ನಲ್ಲಿ ಉಲ್ಲೇಖಗೊಂಡ ವಿಷಯಗಳೇನು?

  • E20 ಜತೆಗೆ ಎಥೆನಾಲ್ ಮುಕ್ತ ಪೆಟ್ರೋಲ್ (E0) ಪೂರೈಕೆ ಮುಂದುವರಿಕೆ.
  • ಇಂಧನ ವಿತರಕಗಳಲ್ಲಿ ಎಥೆನಾಲ್ ಅಂಶದೊಂದಿಗೆ ಸ್ಪಷ್ಟವಾಗಿ ಲೇಬಲ್ ಮಾಡಬೇಕು.
  • ಇಂಧನ ತುಂಬಿಸುವ ಸಮಯದಲ್ಲಿ ವಾಹನವು ಇಂಧನಕ್ಕೆ ಸೂಕ್ತವಾಗಿದೆಯೇ ಎಂದು ವಾಹನ ಚಾಲಕರಿಗೆ ತಿಳಿಸಬೇಕು.
  • ಗ್ರಾಹಕ ರಕ್ಷಣಾ ಮಾನದಂಡಗಳನ್ನು ಜಾರಿಗೆ ತರಬೇಕು.
  • ವಾಹನ ಕಾರ್ಯಕ್ಷಮತೆಯ ಮೇಲೆ E20 ದೀರ್ಘಕಾಲೀನ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು.

2023ಕ್ಕೂ ಹಿಂದಿನ ವಾಹನಗಳಿಗೆ ಎಫೆಕ್ಟ್​!

ಅಸಲಿ ಸಮಸ್ಯೆಯೆಂದರೆ 2023ರ ಮೊದಲು ತಯಾರಿಸಿದ ವಾಹನಗಳಿಗೆ ಈ ಸೌಲಭ್ಯ ಲಭ್ಯವಿಲ್ಲ. ಇದರಿಂದಾಗಿ, ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ ಕಾರು ಅಥವಾ ಬೈಕ್ ಇಂಜಿನ್‌ ಹಾನಿಯಾಗುವ ಅಪಾಯ ಹೆಚ್ಚು. ಪ್ರತಿ ಬಾರಿ ಕಾರು ಅಥವಾ ಬೈಕನ್ನು ದುರಸ್ತಿಗೆ ತೆಗೆದುಕೊಳ್ಳಬೇಕಾದಾಗ, ಕೇಂದ್ರವು ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಸಹ ಹೆಚ್ಚಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಹಳೆಯ ವಾಹನಗಳನ್ನು ಖರೀದಿಸುವುದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯವರೆಗೆ ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಕೇವಲ ಶೇ.10ರಷ್ಟಿತ್ತು. ಆಗಸ್ಟ್ 1ರಿಂದ ಕೇಂದ್ರವು ಅದನ್ನು ಶೇ.20ರಷ್ಟು ಹೆಚ್ಚಿಸಿದೆ. ಪೆಟ್ರೋಲ್‌ಗಿಂತ ಅಗ್ಗದ ಬೆಲೆಯಲ್ಲಿ ಎಥೆನಾಲ್ ಲಭ್ಯವಿದೆ ಎಂಬುದು ಗಮನಾರ್ಹ.

ಏನಿದು E20 ಪೆಟ್ರೋಲ್?

E20 ಪೆಟ್ರೋಲ್ ಶೇ.80ರಷ್ಟು ಬೆರೆಸಿದ ಶೇ.20ರಷ್ಟು ಎಥೆನಾಲ್ ಅನ್ನು ಒಳಗೊಂಡಿರುವ ಇಂಧನವಾಗಿದೆ. ಎಥೆನಾಲ್ ಪ್ರಾಥಮಿಕವಾಗಿ ಕಬ್ಬು ಮತ್ತು ಇತರ ಕೃಷಿ ಉಪಉತ್ಪನ್ನಗಳಿಂದ ಪಡೆದ ಜೈವಿಕ ಇಂಧನವಾಗಿದೆ. ಇದು ಪೆಟ್ರೋಲ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉರಿಯುತ್ತದೆ. ಇದು ವಾಹನಗಳಿಂದ ಮಾಲಿನ್ಯಕಾರಕ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ. ದೇಶದಲ್ಲಿ ವಾಹನ ತಯಾರಕರು ಈಗಾಗಲೇ ಈ ಇಂಧನಕ್ಕೆ ಹೊಂದಿಕೆಯಾಗುವ ಇಂಜಿನ್‌ಗಳನ್ನು ತಯಾರಿಸುತ್ತಿದ್ದಾರೆ. ಆದಾಗ್ಯೂ, ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಅನ್ನು ಹಳೆಯ ವಾಹನಗಳ ಇಂಜಿನ್‌ಗಳಿಗೆ ಹಾಕಿದರೆ, ಇಂಜಿನ್​ ತುಕ್ಕು ಹಿಡಿಯುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net