

Supreme Court: ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಜನರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ನೆರವಾಗದೆ ಉದಾಸೀನ ತೋರಿದ ಬಿಹಾರದ ರಾಜಕೀಯ ಪಕ್ಷಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 22) ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು 12 ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದ್ದು, ಚುನಾವಣಾ ಆಯೋಗ ಪಟ್ಟಿ ಮಾಡಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದರೊಂದಿಗೆ ಅಥವಾ ಆಧಾರ್ ಕಾರ್ಡ್ನೊಂದಿಗೆ ಜನರು ದೂರುಗಳನ್ನು ಸಲ್ಲಿಸಲು ಅನುಕೂಲ ಕಲ್ಪಿಸಲು ಪಕ್ಷದ ಕಾರ್ಯಕರ್ತರಿಗೆ ಆದೇಶಗಳನ್ನು ಹೊರಡಿಸುವಂತೆ ಸೂಚಿಸಿದೆ.
ಇದನ್ನೂ ಓದಿ:ಈದ್ ಮಿಲಾದ್ ದಿನ ಗಣೇಶ ವಿಸರ್ಜನೆ ರದ್ದು
ಬಿಹಾರದಲ್ಲಿ 1.68 ಲಕ್ಷಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳಿವೆ ಎಂದು ಚುನಾವಣಾ ಆಯೋಗ ತಿಳಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷಗಳ ನಿಷ್ಕ್ರಿಯತೆ ನಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದಿರುವ ಸುಪ್ರೀಂ ಕೋರ್ಟ್, ಬಿಎಲ್ಎಗಳನ್ನು (ಬೂತ್-ಲೆವೆಲ್ ಏಜೆಂಟ್ಗಳು) ನೇಮಕದ ಉದ್ದೇಶವೇನು ಎಂದು ಪ್ರಶ್ನಿಸಿತು.
ಜನರು ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳ ನಡುವೆ ಅಂತರದ ಬಗ್ಗೆ ಉಲ್ಲೇಖಿಸುತ್ತಾ, ರಾಜಕೀಯ ಪಕ್ಷಗಳು ಮತದಾರರಿಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯವು ತಿಳಿಸಿತು. ಕರಡು ಪಟ್ಟಿಯಿಂದ ತೆಗೆದು ಹಾಕಲಾಗಿರುವ 65 ಲಕ್ಷ ಜನರು ಮೃತಪಟ್ಟಿದ್ದಾರೆಯೇ ಅಥವಾ ಸ್ವಯಂಪ್ರೇರಣೆಯಿಂದ ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆಯೇ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳ ಬಿಎಎಲ್ಎಗಳು ಪರಿಶೀಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಇದನ್ನೂ ಓದಿ:ಕೈಲಾದ ಸಹಾಯದಿಂದ ಜೀವನಕ್ಕೆ ಅರ್ಥ
ರಾಜಕೀಯ ಪಕ್ಷಗಳ ವಾದಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ , ತಮ್ಮ ಬಿಎಲ್ಎಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ ಎಂದು ವಾದಿಸಿದರು. ವಕೀಲರ ಮಾತನ್ನು ಗಂಭಿರವಾಗಿ ತಗೆದುಕೊಂಡ ನ್ಯಾಯಮೂರ್ತಿಗಳು, ಪ್ರತ್ಯೇಕವಾಗಿ ಅಥವಾ ಬಿಎಲ್ಎ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಚುನಾವಣಾ ಸಂಸ್ಥೆಯ ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನಗಳು ಬಂದವು.(ಏಜೆನ್ಸೀಸ್)