'ಇಂಡಿಯಾ'ನೋ, 'ಭಾರತ'ನೋ? ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

Supreme Court 17 Dec 19
Published on: 

ನವದೆಹಲಿ: ನಮ್ಮ ದೇಶದ ಹೆಸರನ್ನು ಇಂಡಿಯಾದ ಬದಲು ಭಾರತ ಅಥವಾ ಹಿಂದೂಸ್ಥಾನ ಮಾಡುವ ಸಂಬಂಧ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮಾಡಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಮುಂದೂಡಿದೆ.

ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ‘ಇಂಡಿಯಾ” ಎಂಬ ಹೆಸರನ್ನು “ಭಾರತ” ಅಥವಾ “ಹಿಂದೂಸ್ಥಾನ” ಎಂದು ಬದಲಾಯಿಸುವಂತೆ ಕೋರಿ ದೆಹಲಿಯ ನಮಃ ಎಂಬುವವರು ಸಲ್ಲಿಸಿರುವ ಅರ್ಜಿ ಇದಾಗಿದೆ. ಸುಪ್ರೀಂಕೋರ್ಟ್​ ಯಾವುದೇ ದಿನಾಂಕವನ್ನು ನೀಡದೆ ವಿಚಾರಣೆಯನ್ನು ಮುಂದೂಡಿದೆ.

ಮುಘಲ್​ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ “ಇಂಡಿಯಾ” ಆಗಿ ಬದಲಾಗಿದೆ. ಆದರೆ ಬ್ರಿಟಿಷರ ಹೆಸರು ನಮಗೆ ಬೇಡ. ನಮ್ಮ ದೇಶ ಒಂದೋ ಭಾರತವಾಗಲೀ ಇಲ್ಲವೇ ಹಿಂದೂಸ್ಥಾನವಾಗಲಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸಂವಿಧಾನದ 1 ನೇ ಪರಿಚ್ಛೇದವು “ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹಾರ” ಇದರ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿಯೇ ತಿದ್ದುಪಡಿ ತರುವ ಮೂಲಕ ನಮ್ಮ ದೇಶವನ್ನು “ಇಂಡಿಯಾ”ಮುಕ್ತ ಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

“ಇಂಡಿಯಾ” ಎನ್ನುವುದು ಇಂಗ್ಲಿಷ್​ ಪದ. ಇದನ್ನು ತೆಗೆದು ಹಾಕಿ ಹಿಂದೂಸ್ಥಾನ ಅಥವಾ ಭಾರತ ಎಂದು ಮಾಡಿದರೆ ಎಲ್ಲರಲ್ಲಿಯೂ ರಾಷ್ಟ್ರೀಯತೆ ಭಾವ ಮೂಡುತ್ತದೆ. ಹೆಸರು ತೆಗೆಯುವುದು ಸಾಂಕೇತಿಕ ಎಂದು ಎನಿಸಿದರೂ ಹೆಸರು ಬದಲಾವಣೆಯಿಂದ ನಮ್ಮತನದ ಭಾವನೆ ಮೂಡುವ ಕಾರಣ ಇಂಗ್ಲಿಷರ ಶಬ್ದ ನಮಗೆ ಬೇಡ. ನಮ್ಮ ಪೂರ್ವಜರು ಸ್ವಾತಂತ್ರ್ಯ ತರಿಸಿಕೊಡಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಆದ್ದರಿಂದ ಇಂಗ್ಲಿಷರು ಆಳ್ವಿಕೆಯ ಹೆಸರನ್ನು ತೆಗೆದುಹಾಕಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.