'ಈ ಸ್ಯಾನಿಟೈಸರ್​ ಹಚ್ಚಿ, ಕರೊನಾ ತೊಲಗಿಸಿ' ಎಂದ ಕಂಪನಿಗೆ ಹೈಕೋರ್ಟ್​ನಿಂದ ಒಂದು ಲಕ್ಷ ರೂ. ದಂಡ

detolweb
Published on

ನವದೆಹಲಿ: ಈಗ ಕರೊನಾ ಅಬ್ಬರದಿಂದ ಕೆಲವೊಂದು ಜಾಹೀರಾತು ಕಂಪನಿಗಳು ಭಾರಿ ದುಡ್ಡು ಮಾಡಿಕೊಳ್ಳುತ್ತಿವೆ. ಅದರಲ್ಲಿಯೂ ಸ್ಯಾನಿಟೈಸರ್​ ಕಂಪನಿಗಳಂತೂ ಕೋಟಿ ಕೋಟಿ ದುಡಿದುಬಿಟ್ಟಿವೆ.

ಸ್ಯಾನಿಟೈಸರ್​ಗೆ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಭಾರಿ ಡಿಮಾಂಡ್​ ಬರುತ್ತಿರುವ ಕಾರಣ, ನಕಲಿ ಸ್ಯಾನಿಟೈಸರ್​ಗಳು ಎಗ್ಗಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೊಸ ಹೆಸರಿನ ಕಂಪನಿಗಳ ಮೇಲೆ ಜನರಿಗೆ ನಂಬಿಕೆ ಬರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಈಗಾಗಲೇ ಪ್ರಸಿದ್ಧಿಯಾಗಿರುವ ಕಂಪನಿಗಳ ಹೆಸರುಗಳನ್ನೇ ಅಲ್ಪಸ್ವಲ್ಪ ಬದಲಿಸಿ ಇಡಲಾಗುತ್ತಿದೆ.

ಇಂಥ ಒಂದು ಟ್ರೆಂಡ್​ ಕರೊನಾ ವೈರಸ್​ ಮಾತ್ರವಲ್ಲದೇ, ಬಹಳ ಹಿಂದಿನಿಂದಲೂ ನಡೆದುಬಂದಿದೆ. ಯಾವುದಾದರೂ ಬ್ರ್ಯಾಂಡ್​ನ ಕಂಪನಿಯೊಂದು ಬಹಳ ಫೇಮಸ್​ ಆಗಿದ್ದರೆ, ಅದೇ ರೀತಿಯ ನಕಲು ಮಾಡಿ, ಒಂದೋ, ಎರಡೋ ಸ್ಪೆಲ್ಲಿಂಗ್​ಗಳನ್ನು ಆಚೀಚೆ ಮಾಡಿ, ಥಟ್ಟನೆ ನೋಡಿದರೆ ನಕಲಿ ಯಾವುದು ಅಸಲಿ ಯಾವುದು ಎಂದು ತಿಳಿಯದೇ ಮೋಸ ಮಾಡುವವರೇ ಹೆಚ್ಚು.

ಅದರಲ್ಲಿಯೂ ಈಗ ಸ್ಯಾನಿಟೈಜರ್​ಗಳ ಬೇಡಿಕೆ ಹೆಚ್ಚಿರುವ ಕಾರಣ, ಅದರತ್ತ ಎಲ್ಲರ ಗಮನ ಹೋಗಿದೆ. ಇದೇ ರೀತಿ ಡೆಟಾಲ್​ ಕಂಪನಿಯ ಹೆಸರನ್ನೇ ಹೋಲುವ ಸ್ಯಾನಿಟೈಸರ್​ ಬಾಟಲ್​ ತಯಾರು ಮಾಡಿ ಡೆವ್​ಟಾಲ್​​ ಎಂದು ಹೆಸರಿಟ್ಟು ಗ್ರಾಹಕರನ್ನು ಮೋಸ ಮಾಡುತ್ತಿದ್ದ ಕಂಪೆನಿಗೆ ದೆಹಲಿ ಹೈಕೋರ್ಟ್​ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ತನ್ನ ಬ್ರ್ಯಾಂಡ್​ ಅನ್ನೇ ಹೋಲುವ ಸ್ಯಾನಿಟೈಸರ್​ ತಯಾರು ಮಾಡುತ್ತಿರುವ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೆಕಿಟ್ ಬೆನ್‌ಕಿಸರ್ ಕಂಪನಿ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಸ್ಯಾನಿಟೈಸರ್​ ಹಚ್ಚಿಕೊಂಡರೆ ಕರೊನಾ ವೈರಸ್​ ಹತ್ತಿರ ಸುಳಿಯುವುದಿಲ್ಲ ಎನ್ನುವ ಮೂಲಕ ಡೆವ್​ಟಾಲ್​ ಹೆಸರಿನಲ್ಲಿ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸ್ಯಾನಿಟೈಸರ್​ ಬಿಡುಗಡೆ ಮಾಡಿದೆ. ಜನರು ಇದನ್ನು ಡೆಟಾಲ್​ ಎಂದು ನಂಬಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ತಮಗೆ ತುಂಬಾ ಅನ್ಯಾಯ ಆಗುತ್ತಿದೆ. ಮಾತ್ರವಲ್ಲದೇ ಅದರ ಗುಣಮಟ್ಟದ ಬಗ್ಗೆಯೂ ಖಾತ್ರಿ ಇಲ್ಲದ ಹಿನ್ನೆಲೆಯಲ್ಲಿ ಡೆಟಾಲ್​ಗೆ ಕೂಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅದು ದೂರಿತ್ತು.

ಡೆವ್​ಟಾಲ್​ ಹೆಸರಿನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಪ್ರಾಡಕ್ಟ್​ಗಳನ್ನು ಹಿಂದಕ್ಕೆ ಪಡೆಯುವಂತೆ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್​ ಗೆ ಹೇಳಿರುವ ಹೈಕೋರ್ಟ್​, ಅದರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಒಂದು ಲಕ್ಷ ರೂಪಾಯಿ ದಂಡ ಹಾಕಿದೆ. ಈ ದಂಡದ ಹಣವನ್ನು ಕೋರ್ಟ್​ನಿಂದ ಕಾರ್ಯನಿರ್ಹವಿಸುತ್ತಿರುವ ಬಾಲಾರೋಪಿ ನ್ಯಾಯ ಪರಿಹಾರ ನಿಧಿಗೆ ನೀಡುವಂತೆ ಕೋರ್ಟ್​ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net