ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್​ ಎಷ್ಟು ದಿನ ಸೇಫಾಗಿ ಇರಬಹುದು? ಲೇಟಾದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ... Sunita Williams

Sunita Williams
Published on

Sunita Williams : ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದಾರೆ. ಎಂಟು ದಿನಗಳ ಕಾರ್ಯಾಚರಣೆಯ ಭಾಗವಾಗಿ ಇಬ್ಬರು ಗಗನಯಾತ್ರಿಗಳು ಈ ವರ್ಷ ಜೂನ್ 6ರಂದು ಬೋಯಿಂಗ್ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಜೂನ್ 14 ರಂದು ಭೂಮಿಗೆ ಮರಳಬೇಕಾಗಿತ್ತು. ಆದರೆ, ಹೀಲಿಯಂ ಸೋರಿಕೆಯಿಂದಾಗಿ ಸ್ಟಾರ್​ಲೈನರ್​ ಕ್ಯಾಪ್ಸುಲ್​​ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಹೀಗಾಗಿ ಗಗನಯಾತ್ರಿಗಳನ್ನು ಅಲ್ಲಿಯೇ ಬಿಟ್ಟು ಸ್ಟಾರ್​ಲೈನರ್​ ಕ್ಯಾಪ್ಸುಲ್​ ಭೂಮಿಗೆ ತಲುಪಿತು. ಅಂದಿನಿಂದ, ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ನಾಸಾ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಅವರ ಪ್ರಯತ್ನ ವಿಫಲವಾಗುತ್ತಿದೆ. ಹೀಗಾಗಿ ಕಳೆದ ಏಳು ತಿಂಗಳಿಂದ ಇಬ್ಬರು ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದಾರೆ. ನಾಸಾ ಇತ್ತೀಚೆಗಷ್ಟೇ ಅವರನ್ನು ಭೂಮಿಗೆ ಕರೆತರುವ ಕುರಿತು ಪ್ರಮುಖ ಘೋಷಣೆ ಮಾಡಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಆದರೆ, ಎರಡು ದಿನಗಳ ನಂತರ ಮತ್ತೊಂದು ಘೋಷಣೆ ಮಾಡಿ, ಏಪ್ರಿಲ್ ಮೊದಲ ವಾರದಲ್ಲಿ ಭೂಮಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಿತು.

ದಿನಾಂಕ ಘೋಷಣೆಯಾಗಿದ್ದರು ಕೂಡ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್​ ಭೂಮಿಗೆ ಯಾವಾಗ ಮರಳುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಈ ಪ್ರಕ್ರಿಯೆಯಲ್ಲಿ ಅವರ ಆರೋಗ್ಯವು ಹದಗೆಡುವ ಸಾಧ್ಯತೆಯಿದೆ ಎಂದು ತೋರುತ್ತದೆ. ಸಾಮಾನ್ಯವಾಗಿ ಒಬ್ಬ ಗಗನಯಾತ್ರಿ ಅಂತರಿಕ್ಷದಲ್ಲಿದ್ದಾಗ ಅಲ್ಲಿ ಎಷ್ಟು ದಿನ ಬದುಕಬಹುದು ಎಂಬ ಪ್ರಶ್ನೆ ಮೂಡುತ್ತದೆ.

ವಿಜ್ಞಾನ ಏನು ಹೇಳುತ್ತದೆ?

ಗಗನಯಾತ್ರಿಗಳು ಯಾವುದೋ ಕಾರಣಕ್ಕಾಗಿ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡರೆ, ಅವರು ಸುಲಭವಾಗಿ 300 ರಿಂದ 400 ದಿನಗಳವರೆಗೆ ಅಂದರೆ, ಒಂದು ವರ್ಷ ಆರಾಮಾಗಿ ಅಲ್ಲಿಯೇ ಉಳಿಯಬಹುದು. ಈ ಪ್ರಕಾರ ಸುನಿತಾ ವಿಲಿಯಮ್ಸ್ ಇನ್ನು ಕೆಲವು ತಿಂಗಳು ಸುರಕ್ಷಿತವಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಬಹುದು. ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ದಾಖಲೆ ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಅವರ ಹೆಸರಿನಲ್ಲಿದೆ. ಅವರು 1994ರ ಜನವರಿಯಿಂದ 1995ರ ಮಾರ್ಚ್​ವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 437 ದಿನಗಳನ್ನು ಕಳೆದರು.

ಹೆಚ್ಚು ದಿನ ಬಾಹ್ಯಾಕಾಶದಲ್ಲೇ ಉಳಿದರೆ ಏನಾಗುತ್ತದೆ?

ಬಾಹ್ಯಾಕಾಶದ ವಾತಾವರಣವೇ ತುಂಬಾ ವಿಭಿನ್ನ. ಈ ವಾತಾವರಣದಲ್ಲಿ ಒತ್ತಡದ ಅನುಪಸ್ಥಿತಿ ಇರುತ್ತದೆ ಮತ್ತು ವಿಪರೀತ ನಿರ್ವಾತ ಪರಿಸ್ಥಿತಿ ಇರುತ್ತದೆ. ಹೀಗಾಗಿ ಎಚ್ಚರಿಕೆಯ ನಡೆ ಅತ್ಯಗತ್ಯ. ಗಗನಯಾತ್ರಿಗಳ ಉಳಿವಿಗಾಗಿ ಅಗತ್ಯವಾದ ಆಮ್ಲಜನಕ ಮಟ್ಟ ಸೇರಿದಂತೆ ನಿಯಂತ್ರಿತ ವಾತಾವರಣವನ್ನು ಒದಗಿಸಲು ಬಾಹ್ಯಾಕಾಶ ನೌಕೆಯಂತಹ ವ್ಯವಸ್ಥೆಗಳನ್ನು ಅಂಬಿಸಿರುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ವೈಫಲ್ಯ ಕಾಣಿಸಿಕೊಂಡರು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೆ, ಸಾವು ಸಂಭವಿಸುವ ಸಾಧ್ಯತೆಯೂ ಇದೆ.

ಬಾಹ್ಯಾಕಾಶದಲ್ಲಿರುವ ವಿಶಿಷ್ಟ ಪರಿಸರವು ದೇಹದಲ್ಲಿ ದ್ರವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ದೇಹದೊಳಗಿನ ದ್ರವಗಳು ಮೇಲಿನ ದೇಹದ ಮೇಲ್ಭಾಗಕ್ಕೆ ಮರುಹಂಚಿಕೆಯಾಗುತ್ತವೆ. ಇದರಿಂದ ಇಂಟ್ರಾಕ್ರೇನಿಯಲ್ ಒತ್ತಡ ಹೆಚ್ಚಾಗಬಹುದು. ಹೀಗಾದಲ್ಲಿ ತಲೆನೋವು, ದೃಷ್ಟಿಹೀನತೆ ಮತ್ತು ಮೆದುಳು ಹಾನಿಯಾಗಬಹುದು. ಅಲ್ಲದೆ, ಬಾಹ್ಯಾಕಾಶದಲ್ಲಿ ಕಾಸ್ಮಿಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಡಿಎನ್​ಎಗೂ ಹಾನಿಯಾಗಬಹುದು. ಇದರಿಂದ ಕ್ಯಾನ್ಸರ್​ ಸೇರಿದಂತೆ ಇತರೆ ನರವೈಜ್ಞಾನಿಕ ಪರಿಸ್ಥಿತಿಗಳು ಸಹ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸದ್ಯ ನಾಸಾ ಬಾಹ್ಯಾಕಾಶ ನೌಕೆಯಲ್ಲಿನ ರೇಡಿಯೇಷನ್​ ಮಟ್ಟವನ್ನು ಮಾನಿಟರ್​ ಮಾಡುತ್ತಿದೆ. ಆದರೆ, ಸುನಿತಾ ವಿಲಿಯಮ್ಸ್​ ಆಗಮನ ವಿಳಂಬವಾದಷ್ಟು ಮೆದುಳಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಮೆದುಳು ಕಾರ್ಯಕ್ಕೆ ಆಮ್ಲಜನಕ ತುಂಬಾನೇ ಮುಖ್ಯ. ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಮೆದುಳು ಹೆಚ್ಚು ಸಂವೇದನಾಶೀಲವಾಗಿರುತ್ತದೆ ಮತ್ತು ಅಲ್ಪಾವಧಿಯ ಕೊರತೆಯು ಸಹ ಆಳವಾದ ಪರಿಣಾಮಗಳನ್ನು ಬೀರುತ್ತದೆ. ಕೆಲವೇ ನಿಮಿಷಗಳ ಆಮ್ಲಜನಕ ಕೊರತೆಯು ಮೆದುಳು ಕೋಶಗಳ ಸಾವಿಗೆ ಕಾರಣವಾಗಬಹುದು. ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ, ಗಗನಯಾತ್ರಿಗಳಿಗೆ ಲೈಫ್​ ಸಪೋರ್ಟಿಂಗ್​ ಸಿಸ್ಟಮ್​ ಮೂಲಕ ಆಮ್ಲಜನಕವನ್ನು ನಿರಂತರವಾಗಿ ಪೂರೈಸಲಾಗುತ್ತದೆ. ಆದಾಗ್ಯೂ, ಈ ವ್ಯವಸ್ಥೆಯು ವಿಫಲವಾದಲ್ಲಿ ಅಥವಾ ಆಮ್ಲಜನಕದ ಕೊರತೆಗೆ ಕಾರಣವಾಗುವ ತುರ್ತುಸ್ಥಿತಿ ಎದುರಾದರೆ, ಅದರಿಂದಾಗುವ ಅಪಾಯಗಳು ಮಾತ್ರ ಗಮನಾರ್ಹವಾಗಿವೆ.

ಇನ್ನು ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಬರುವುದಿಲ್ಲ. ಈ ವಿಳಂಬದಿಂದಾಗಿ ಪೋಸ್ಟ್​ ಟ್ರಾಮಾಟಿಕ್​ ಸ್ಟ್ರೆಸ್​ ಡಿಸಾರ್ಡರ್​ (ಪಿಟಿಎಸ್​ಡಿ) ಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net