

MCA: ಮುಂಬೈನ ಐತಿಹಾಸಿಕ ಕ್ರೀಡಾಂಗಣ ವಾಂಖೆಡೆಯಲ್ಲಿ ಆಗಸ್ಟ್ ತಿಂಗಳ ಮಧ್ಯದಲ್ಲಿ ಉದ್ಘಾಟನೆಯಾಗಲಿರುವ ಶರದ್ ಪವಾರ್ ಕ್ರಿಕೆಟ್ ಮ್ಯೂಸಿಯಂ ಪ್ರವೇಶದ್ವಾರದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಗುರುವಾರ (ಜುಲೈ 31) ಘೋಷಿಸಿದೆ.
ಈ ವಿಷಯವಾಗಿ ಮಾತನಾಡಿರುವ ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್, ಗವಾಸ್ಕರ್ ಅವರ ಪ್ರತಿಮೆಯು ಶ್ರೇಷ್ಠತೆ ಮತ್ತು ಸಮರ್ಪಣೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಇದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ ಎಂದರು.
ಪ್ರಸ್ತುತ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥರಾಗಿರುವ ಶರದ್ ಪವಾರ್, MCA, BCCI ಮತ್ತು ICC ಅಧ್ಯಕ್ಷರಾಗಿ ಕ್ರಿಕೆಟ್ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ವಸ್ತುಸಂಗ್ರಹಾಲಯವು ಕ್ರೀಡೆಯೊಂದಿಗಿನ ಅವರ ದೀರ್ಘಕಾಲದ ಸಂಬಂಧ ಮತ್ತು ಕೊಡುಗೆಗೆ ಸಂದ ಗೌರವ ಎಂದರು.
ವಸ್ತುಸಂಗ್ರಹಾಲಯದ ಪ್ರವೇಶದ್ವಾರದಲ್ಲಿ ನಿರ್ಮಾಣವಾಗಲಿರುವ ಶರದ್ ಪವಾರ್ ಮತ್ತು ಸುನಿಲ್ ಗವಾಸ್ಕರ್ ಅವರ ಪ್ರತಿಮೆಗಳು ಇಲ್ಲಿಗೆ ಭೇಟಿ ನೀಡುವವರನ್ನು ಸ್ವಾಗತಿಸುತ್ತವೆ ಎಂದರು.
ಭಾರತ ಕ್ರಿಕೆಟ್ ಲೋಕ ಕಂಡ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಗವಾಸ್ಕರ್, ಎಂಸಿಎ ನಿರ್ಧಾರಕ್ಕೆ ಧನ್ಯವಾಧಗಳನ್ನು ತಿಳಿಸಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿರುವ ಹೊಸ ವಸ್ತುಸಂಗ್ರಹಾಲಯದ ಪ್ರವೇಶದ್ವಾರದಲ್ಲಿ ತಮ್ಮ ಪ್ರತಿಮೆಯನ್ನು ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿರುವ ಮಾತೃ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಗೌರವಕ್ಕೆ ತಾವೂ ಆಭಾರಿಯಾಗಿರುವುದಾಗಿ ತಿಳಿಸಿದರು. ಕ್ರಿಕೆಟ್ ಆಟದಲ್ಲಿ ಅಂಬೆಗಾಲಿಡುವ ಸಮಯದಿಂದಲೂ ಅವರಿಗೆ ನೆರವಾಗಿರುವ ಮುಂಬೈ ಕ್ರಿಕೆಟ್ ಸಂಘಕ್ಕೆ ಮತ್ತು ದೇಶವನ್ನು ಪ್ರತಿನಿಧಿಸುವ ಕನಸನ್ನು ನನಸಾಗಿಸಿದ ಬಿಸಿಸಿಐಗೆ ಯಾವತ್ತಿಗೂ ಕೃತಜ್ಞನಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಈ ವಸ್ತು ಸಂಗ್ರಹಾಲಯವು ಮುಂಬೈನ ಕ್ರಿಕೆಟಿಗರು ದಾನ ಮಾಡಿದ ಅಪರೂಪದ ಮತ್ತು ಸಾಂಪ್ರದಾಯಿಕ ಸ್ಮರಣಿಕೆಗಳ ಸಂಗ್ರಹವನ್ನು ಒಳಗೊಂಡಿರುತ್ತದೆ.(ಏಜೆನ್ಸೀಸ್)