

ನವದೆಹಲಿ: ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿ ಅಮೆರಿಕಾದಲ್ಲಿ ನಡೆಯುತ್ತಿದ್ದು, ಕಳೆದ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ಯುಎಸ್ಎ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಯುವ ವೇಗಿ ಅರ್ಷದೀಪ್ ಸಿಂಗ್, ನಾಲ್ಕು ಓವರ್ಗಳಲ್ಲಿ ಕೇವಲ 9 ರನ್ಗಳನ್ನು ಕೊಟ್ಟು 4 ವಿಕೆಟ್ ಕಬಳಿಸಿದರು. ಇದಕ್ಕಾಗಿ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದರು.
ಇನ್ನು ಪಂದ್ಯದ ಬಳಿಕ ಅರ್ಷದೀಪ್ ಸಿಂಗ್ ಪ್ರದರ್ಶನ ಕೊಂಡಾಡಿದ ಸುನಿಲ್ ಗವಾಸ್ಕರ್, "ಆತನಿಗೆ ಉತ್ತಮ ಬೌಲಿಂಗ್ ಮಾಡುವ ಸಾಮರ್ಥ್ಯವಿದೆ. ಎರಡು ರೀತಿಯಲ್ಲಿ ಸ್ವಿಂಗ್ ಹಾಕುವುದು ತಿಳಿದಿದೆ. ಈ ಯುವ ಸೀಮರ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯಗಳನ್ನು ಆಡುವುದು ಉತ್ತಮ. ಬಲಗೈ ಬ್ಯಾಟರ್‌ಗಳಿಗೆ ಭಾರೀ ತೊಂದರೆ ಕೊಡುವ ಸಿಂಗ್, ಸ್ಟಂಪ್ಗಳನ್ನು ಗುರಿಯಾಗಿಟ್ಟುಕೊಂಡು, ಬಾಲ್ನ ಪಿಚ್ ಮಾಡುತ್ತಾರೆ. ರೆಡ್ ಬಾಲ್ನಲ್ಲಿಯೂ ಅತ್ಯುತ್ತಮ ಪ್ರದರ್ಶನ ಕೊಡುವ ಸಾಮರ್ಥ್ಯ ಅರ್ಷದೀಪ್ಗಿದೆ" ಎಂದರು.
"ವೈಟ್ ಬಾಲ್ನಲ್ಲಿಯೇ ಬಹಳ ಪರಿಣಾಮಕಾರಿ ಬೌಲಿಂಗ್ ಮಾಡುವುದನ್ನು ತಿಳಿದಿರುವ ಅರ್ಷದೀಪ್ ಸಿಂಗ್, ರೆಡ್ ಬಾಲ್ನಲ್ಲಿಯೂ ತಮ್ಮ ಕೈಚಳಕ ತೋರಬಹುದು. ಭಾರತದ ಟೆಸ್ಟ್ ತಂಡಕ್ಕೆ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಇಂಡಿಯನ್ ಸೆಲೆಕ್ಷನ್ ಟೀಮ್ ಹೆಚ್ಚು ಗಮನಹರಿಸುವುದು ಒಳಿತು. ಪ್ರಸ್ತುತ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಬೌಲಿಂಗ್ ದಾಳಿಯನ್ನು ನೀವು ಗಮನಿಸಿದರೆ, ಅರ್ಷದೀಪ್ ಕೂಡ ಅವರಂತೆಯೇ ಬೌಲಿಂಗ್ ಮಾಡುತ್ತಾರೆ" ಎಂದಿದ್ದಾರೆ,(ಏಜೆನ್ಸೀಸ್).