

ಟೋಕಿಯೋ: ಕೆಲವು ದಿನಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದುತಂದಿದ್ದರು. ಇದೀಗ ಅಲ್ಲೇ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020ರಲ್ಲಿ ಇಂದಿನ ಪುರುಷರ ಜಾವೆಲಿನ್ ಎಸೆತ ಎಫ್64 ಅಂತಿಮ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಅಂತಿಲ್ ಅಪ್ರತಿಮ ಆಟ ಪ್ರದರ್ಶಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಮೊದಲನೇ ಎಸೆತದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಸುಮಿತ್, ನಂತರದ ಪ್ರಯತ್ನಗಳಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದು ಗಮನ ಸೆಳೆದರು. ಮೊದಲನೇ ಪ್ರಯತ್ನದಲ್ಲಿ 66.95ಮೀಟರ್ ದೂರ ಎಸೆತ ಸಾಧಿಸಿ ಪ್ಯಾರಾಲಿಂಪಿಕ್ಸ್ನಲ್ಲಿ ವಿಶ್ವದಾಖಲೆ ಮಾಡಿದರು. ನಂತರ ಎರಡನೇ ಪ್ರಯತ್ನದಲ್ಲಿ 68.08ಮೀಟರ್ ದೂರ ಎಸೆದರು, ಐದನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ದಾಖಲೆ ಸಾಧಿಸಿದರು. ಇದರೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಇಂದು ಬೆಳಿಗ್ಗೆ ಅವನಿ ಲೇಖಾರ ಅವರು ಶೂಟಿಂಗ್ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು. ಜಾವೆಲಿನ್ ಥ್ರೋ ಎಫ್46 ವಿಭಾಗದಲ್ಲಿ ದೇವೇಂದ್ರ ಝಾಝರಿಯ ಎರಡನೇ ಸ್ಥಾನ ಪಡೆದು ರಜತ ಪದಕ ಗೆದ್ದಿದ್ದರು. ಇದೀಗ ಮತ್ತೊಂದು ಚಿನ್ನದ ಪದಕವನ್ನು ಸುಮಿತ್ ಅಂತಿಲ್ ಅವರು ಎಫ್64 ವಿಭಾಗದ ಜಾವೆಲಿನ್ ಥ್ರೋನಲ್ಲೇ ಪಡೆದಿರುವುದು ವಿಶೇಷವಾಗಿದೆ. (ಏಜೆನ್ಸೀಸ್)