ಪ್ಯಾರಾಲಿಂಪಿಕ್ಸ್​: ವಿನೋದ್​ಕುಮಾರ್​ ಕೈತಪ್ಪಿದ ಕಂಚಿನ ಪದಕ

para olympics for web
Published on

ಟೋಕಿಯೋ: ನಿನ್ನೆ ಪುರುಷರ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ 19.91 ಮೀಟರ್ ದಾಖಲೆ ದೂರ ಎಸೆದು, ಮೂರನೇ ಸ್ಥಾನ ಗಳಿಸಿದ್ದ ಭಾರತದ ವಿನೋದ್ ಕುಮಾರ್ ಅವರು ಅಂಗವೈಕಲ್ಯ ವಿಂಗಡನೆಯ ತಾಂತ್ರಿಕ ಮರುವಿಶ್ಲೇಷಣೆಯಲ್ಲಿ ಅನರ್ಹಗೊಳಿಸಲ್ಪಟ್ಟಿದ್ದಾರೆ. ಹೀಗಾಗಿ ಅವರಿಗೆ ಕಂಚಿನ ಪದಕ ನೀಡಲಾಗುವುದಿಲ್ಲ ಎಂದು ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರ ಆಯೋಜಕ ಮಂಡಳಿ ತಿಳಿಸಿದೆ.

41 ವರ್ಷದ ವಿನೋದ್ ಕುಮಾರ್ 6 ಯತ್ನಗಳಲ್ಲೂ ಉತ್ತಮ ನಿರ್ವಹಣೆ ತೋರಲು ಯಶಸ್ವಿಯಾಗಿದ್ದರು. ಅಂಗವೈಕಲ್ಯ ವಿಂಗಡನೆ ಕುರಿತು ಕೆಲವು ಪ್ರತಿಸ್ಪರ್ಧಿಗಳು ತೋರಿದ ಪ್ರತಿಭಟನೆಯಿಂದಾಗಿ ಪದಕ ಪ್ರದಾನವನ್ನು ಮುಂದೂಡಲಾಗಿತ್ತು. ಇದೀಗ ಪ್ಯಾರಾಅಥ್ಲೀಟ್​ಗಳನ್ನು ವಿಂಗಡಿಸಲಾಗುವ ವರ್ಗಕ್ಕೆ ಅವರನ್ನು ಸೇರಿಸಲಾಗದ ಕಾರಣಕ್ಕೆ 'ಕ್ಲಾಸಿಫಿಕೇಶನ್​ ನಾಟ್​ ಕಂಪ್ಲೀಟೆಡ್'​ ಎಂದು ತೀರ್ಮಾನಿಸಲಾಗಿದೆ. ಹೀಗಾಗಿ ಅವರ ಗೆಲುವಿನ ಫಲಿತಾಂಶವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ವಿನೋದ್ ಕುಮಾರ್, ಲಡಾಕ್ ಪ್ರದೇಶದ ಲೆಹ್​ನಲ್ಲಿ ಪ್ರಪಾತದಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಹಲವು ವರ್ಷಗಳ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದ ಅವರು ವೀಲ್​​ಚೇರ್​ನಲ್ಲೇ ತರಬೇತಿ ಪಡೆದು ಪ್ಯಾರಾಅಥ್ಲೀಟ್​ ಆಗಿ ಗುರುತಿಸಿಕೊಂಡರು.​ 2019ರಲ್ಲಿ ನಡೆದ ವಿಶ್ವ ಪ್ಯಾರಾಥ್ಲೀಟ್ಸ್ ಗ್ರಾನ್ ಪ್ರೀಯಲ್ಲಿ ಈ ಹಿಂದೆ ಪದಕ ಜಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net