ಕರೊನಾ ಸೋಂಕು ತಗುಲಿದ್ದ ಸುಮಲತಾ ಅಂಬರೀಶ್, ರಾಕ್​ಲೈನ್​ ವೆಂಕಟೇಶ್​ ಚೇತರಿಕೆ

Sumalatha- Rockline Venkatesh
Published on

ಬೆಂಗಳೂರು: ಕರೊನಾ ಸೋಂಕಿಗೆ ಒಳಗಾಗಿದ್ದ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಷ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗುಣಮುಖರಾಗಿದ್ದಾರೆ.

ಸುಮಲತಾ ಅವರಿಗೆ ಜು.6ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಇದಾದ ಎರಡು ದಿನದ ನಂತರ ಅಂದರೆ ಜು.8ರಂದು ರಾಕ್​ಲೈನ್​ ವೆಂಕಟೇಶ್​ಗೂ ಕರೊನಾ ಪಾಸಿಟಿವ್​ ಬಂದಿತ್ತು.

ಕರೊನಾ ಸೋಂಕು ತಗುಲಿದ್ದ ಸುಮಲತಾ ಮತ್ತು ರಾಕ್​ಲೈನ್​ ವೆಂಕಟೇಶ್​ ಅವರು ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದಾರೆ. ಭಾನುವಾರದಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗುವರು ಎಂದು ಕಲಾವಿದ ದೊಡ್ಡಣ್ಣ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ಕೂಡಲೇ ಸುಮಲತಾ ಅಂಬರೀಶ್​ ಮನೆಯಲ್ಲಿಯೇ ಕ್ವಾರಂಟೈನ್​ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆ ವೇಳೆ ಟ್ವಿಟರ್​ನಲ್ಲಿ ಮಾಹಿತಿ

ಹಂಚಿಕೊಂಡಿದ್ದ ಅವರು, 'ನನ್ನ ಕ್ಷೇತ್ರಗಳ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಕರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ್ದೆ. ಹಾಗಾಗಿ ಸೋಂಕು ತಗುಲಿದೆ. ನನ್ನಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಖಂಡಿತ ಬೇಗ ಗುಣವಾಗುತ್ತೇನೆ' ಎಂದಿದ್ದರು.

ಸುಮಲತಾ ಅಂಬರೀಷ್‌ಗೆ ಕರೊನಾ ದೃಢಪಟ್ಟ ಬೆನ್ನಲ್ಲೇ ಅವರ ನಿಕಟವರ್ತಿ ಆಗಿರುವ ರಾಕ್​ಲೈನ್ ವೆಂಕಟೇಶ್​ಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಗಂಟಲದ್ರವದ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕನ್ನಡ ಚಿತ್ರರಂಗದ ಕಲಾವಿದರಿಬ್ಬರೂ ಗುಣಮುಖರಾಗಿರುವುದು ಅಭಿಮಾನಿಗಳಲ್ಲಿ ಸಂತಸ ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net