

ವಿಜಯವಾಣಿ ಸುದ್ದಿಜಾಲ ಸುಳ್ಯ
ನಪಂ ಮುಂಭಾಗದ ಶೆಡ್‌ನಲ್ಲಿ ತುಂಬಿಡಲಾಗಿರುವ ಕಸ ತೆರವು ಮಾಡುವ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರ ಮಧ್ಯೆ ಒಡಕು, ಅಸಮಾಧಾನ ಬುಧವಾರ ನಪಂ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡಿದೆ.
ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿದ್ದು, ಸಭೆಯಲ್ಲಿ ಗದ್ದಲಮಯ ವಾತಾವರಣ ಸೃಷ್ಟಿಯಾಯಿತು. ವಿಷಯ ಪ್ರಸ್ತಾಪಿಸಿದ ವಿನಯ ಕುಮಾರ್ ಕಂದಡ್ಕ ನಪಂ ಮುಂಭಾಗದಲ್ಲಿ ತುಂಬಿರುವ ಕಸವನ್ನು ಸಾಗಾಟ ಮಾಡುವ ವಿಚಾರದಲ್ಲಿ ಸಭೆಯಲ್ಲಿ ನಿರ್ಣಯ ಮಾಡದೆ, ಟೆಂಡರ್ ಕರೆಯದೆ ನಿಯಮ ಉಲ್ಲಂಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ ನಿಮ್ಮ ಅವಧಿಯಲ್ಲಿಯೂ ಲಕ್ಷಾಂತರ ರೂ. ಖರ್ಚು ಮಾಡಿ ಕಸ ಸಾಗಾಟ ಮಾಡಿದ್ದೀರಿ ಎಂದರು. ಇದಕ್ಕೆ ಉತ್ತರಿಸಿದ ಕಂದಡ್ಕ ನಮ್ಮ ಅವಧಿಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ, ನಿರ್ಣಯ ಮಾಡಿ ಕಾನೂನು ಪ್ರಕಾರ ಸಾಗಾಟ ಮಾಡಲಾಗಿತ್ತು ಎಂದರು. ಇದಕ್ಕೆ ನಪಂ ಸದಸ್ಯೆ ಶಿಲ್ಪಾ ಸುದೇವ್ ಮತ್ತಿತರರು ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಶಶಿಕಲಾ ಈಗ ಕಸ ವಿಲೇವಾರಿ ಮಾಡುವ ಖಾಸಗಿ ಕಂಪನಿಯ ಮೂಲಕವೇ ಉಳಿದ ಕಸವನ್ನು ಸಾಗಾಟ ಮಾಡಲಾಗುತ್ತದೆ ಎಂದರು. ಹಾಲಿ ಮತ್ತು ಮಾಜಿ ಅಧ್ಯಕ್ಷರ ಮಧ್ಯೆ ಬಿರುಸಿನ ಚರ್ಚೆ, ವಾಗ್ವಾದ ನಡೆಯಿತು.
ಮಧ್ಯ ಪ್ರವೇಶಿಸಿದ ನಪಂ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ, ಈ ಹಿಂದೆ ಕಸ ಉರಿಸಲು ಕರಾರು ಮಾಡಿದ ಖಾಸಗಿ ಕಂಪನಿ ಉರಿಸದೆ ತುಂಬಿಟ್ಟ ಕಸವನ್ನು ಅವರ ಮುಖಾಂತರವೇ ಈಗ ಸಾಗಾಟ ಮಾಡಲಾಗಿದೆ. ಹಿಂದೆ 2021ರಿಂದ 25ರ ತನಕ ಕಸ ಸಾಗಾಟ ಸಂಬಂಧಿಸಿ ಮಾಡಿದ ನಿರ್ಣಯ ತೆಗೆದುಕೊಂಡ ನಿರ್ಧಾರಗಳನ್ನು ಸಭೆಗೆ ತಿಳಿಸಿದರು.
ನಪಂ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಬಸವರಾಜ್, ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.
ತನಿಖೆಗೆ ವಿಪಕ್ಷ ಪಟ್ಟು
ಆಡಳಿತ ಪಕ್ಷದವರ ಮಧ್ಯೆ ಕಸ ವಿಲೇವಾರಿ ವಿಷಯದ ಚರ್ಚೆ, ಆರೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಧೀರಾ ಕ್ರಾಸ್ತಾ, ರಿಯಾಜ್ ಕಟ್ಟೆಕ್ಕಾರ್ ಒತ್ತಾಯಿಸಿದರು. ಕಸ ವಿಲೇವಾರಿ ಕುರಿತು ಲೋಕಾಯುಕ್ತ ತನಿಖೆ ನಡೆಸಲು ನಿರ್ಣಯ ಮಾಡಿ, ಲೋಕಾಯುಕ್ತ ಅಥವಾ ಜಿಲ್ಲಾಧಿಕಾರಿ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು.
ಸದಸ್ಯರ ಅಸಮಾಧಾನ!
ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಸಭೆ ಕರೆಯಲು ಹಿಂದಿನ ಸಭೆಯಲ್ಲಿ ನಿರ್ಧರಿಸಿದ್ದರೂ ನಡೆಯದ ಬಗ್ಗೆ ಎಂ.ವೆಂಕಪ್ಪ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಸಿಸಿ ಟಿವಿ ನಿರ್ವಹಣೆ ಇಲ್ಲದ ಬಗ್ಗೆ ನಗರದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಅಗೆದು ಹಾಕಿದ ರಸ್ತೆ ಸರಿಪಡಿಸದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ, ಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಎಲ್ಲ ಜನಪ್ರತಿನಿಧಿಗಳೂ ಪ್ರಯತ್ನ ನಡೆಸಬೇಕು ಸದಸ್ಯರು ಒತ್ತಾಯಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ದೂರು
ನಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ವಿರುದ್ಧ ನೀರು ಸರಬರಾಜು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಿಬ್ಬಂದಿ ಕ್ಷಮೆ ಕೇಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಆಗ್ರಹಿಸಿದರು. ಈ ವಿಚಾರದಲ್ಲಿ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಧ್ಯೆ ವಾಕ್ಸಮರ ನಡೆಯಿತು. ನಪಂ ಅಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆಯೂ ವಾಗ್ವಾದ ನಡೆಯಿತು. ಬಳಿಕ ಸಿಬ್ಬಂದಿಯನ್ನು ಸಭೆಗೆ ಕರೆದು ವಿವರಣೆ ಕೇಳಿ ಮಾತುಕತೆ ನಡೆಸಿ ಇತ್ಯರ್ಥಗೊಳಿಸಲಾಯಿತು.