

ವಿಜಯವಾಣಿ ಸುದ್ದಿಜಾಲ ಕಡಬ
ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ಮೇ 30ರಂದು ಸುರಿದ ಧಾರಾಕಾರ ಮಳೆಗೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದ್ದು, ಪಕ್ಕದ ಕೃಷಿ ಭೂಮಿಗೆ ಹಾನಿಯಾಗಿರುವ ಪ್ರದೇಶಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲ ವರ್ಗೀಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಂಜಿನಿಯರ್ ಜತೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ರಸ್ತೆ ಕುಸಿದ ಭಾಗದ ಮುಂದುವರಿದ ಎರಡು ಕಡೆಗಳ ರಸ್ತೆ ಇಳಿಜಾರು ಪ್ರದೇಶವಾಗಿದ್ದು, ಮಳೆ ನೀರು ಕುಸಿದ ಜಾಗಕ್ಕೆ ಬಾರದ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಲು ಸ್ಥಳೀಯಾಡಳಿತಕ್ಕೆ ಸೂಚಿಸಿದರು.
ಚರಂಡಿ ನಿರ್ಮಿಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಕ್ರಮ ವಹಿಸಬೇಕು. ಸಹಾಯಕ ಆಯುಕ್ತರ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 10 ಮನೆಗಳಿಗೆ ಈ ರಸ್ತೆ ಸಂಪರ್ಕ ಕೊಂಡಿಯಾಗಿದೆ. ರಸ್ತೆ ಕುಸಿತದಿಂದ ಬಾಹ್ಯ ಸಂಪರ್ಕ ಕಳೆದುಕೊಂಡಿದ್ದೇವೆ. ಈ ಭಾಗದ ಹೈನುಗಾರರು, ವಿದ್ಯಾರ್ಥಿಗಳು ದಿನನಿತ್ಯ ತೆರಳಲು ಈ ರಸ್ತೆಯನ್ನು ಅವಲಂಬಿಸಿದ್ದಾರೆ ಎಂದರು.
ಕೃಷಿಕ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಚಾರ್ವಾಕ ಸಿಎ ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಆಲಂಕಾರು ಗ್ರಾಪಂ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ರವಿ ಪೂಜಾರಿ, ಸದಸ್ಯೆ ಸುಮತಿ ಕೊಡ್ಲ, ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ತಾಪಂ ಮಾಜಿ ಸದಸ್ಯ ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಆಲಡ್ಕ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಮೊದಲಾದವರಿದ್ದರು.
ರಸ್ತೆ ಕುಸಿತದಿಂದ ಸಂಕಷ್ಟ
ಈ ಭಾಗದಲ್ಲಿ ಯುವಕನೋರ್ವ ಅನಾರೋಗ್ಯ ಪೀಡಿತನಾಗಿ ಮಲಗಿದ ಸ್ಥಿತಿಯಲ್ಲಿದ್ದಾನೆ. ಈತನ ಆರೋಗ್ಯ ತಪಾಸಣೆ ನಡೆಸಲು 15 ದಿನಕೊಮ್ಮೆ ಆಸ್ಪತ್ರೆಗೆ ತೆರಳಬೇಕಿದೆ. ರಸ್ತೆ ಕುಸಿತದಿಂದ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ಶಾಸಕರಿಗೆ ಸಮಸ್ಯೆಯ ಅರಿವು ಮೂಡಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಊರವರ ಮನವಿಯನ್ನು ಸ್ಥಳೀಯ ಪ್ರಮುಖರಾದ ಶಿವಣ್ಣ ಗೌಡ ಕಕ್ವೆ ಶಾಸಕರಿಗೆ ನೀಡಿದರು.