

ಇಂದೋರ್: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತನ್ನು ನಮ್ಮ ಹಿರಿಯರು ಸುಮ್ಮನೇ ಹೇಳಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿ ನಡುವೆ ಕ್ಷುಲಕ ಕಾರಣಕ್ಕೆ ಜಗಳಗಳಾಗುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ಕೆಲವೊಮ್ಮೆ ಕೊಲೆ-ಆತ್ಮಹತ್ಯೆ ಮಾಡಿಕೊಂಡಿರುವಂತಹ ಹಲವಾರ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇದೀಗ ಮಹಿಳೆಯೊಬ್ಬರು ಪತಿಯ ಜೊತೆ ಜಗಳವಾಡಿ ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಇಂದೋರ್ನ ಲಸುದಿಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಸಿಂಗಾಪುರ್ ಟೌನ್ಶಿಪ್ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಮಹಿಳೆ ಕಟ್ಟಡದಿಂದ ಜಿಗಿಯುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್, ಮೃತರನ್ನು ಅಂಗೂರಿ ಎಂದು ಗುರುತಿಸಲಾಗಿದ್ದು, ಇವರ ಪತಿ ರಾಹುಲ್ ಜೊತೆ ಆಗಸ್ಟ್ 04ರಂದು ಜಗಳವಾಗಿದೆ. ಜಗಳದ ವೇಳೆ ಪತಿ ಬೈದಿದ್ದಕ್ಕೆ ಕೋಪಗೊಂಡು ತಾವು ವಾಸವಿದ್ದ ಕಟ್ಟಡದ ಮೂರನೇ ಮಹಡಿಗೆ ತೆರಳಿದ್ದಾರೆ. ಈ ವಿಚಾರವನ್ನು ತಿಳಿದ ಪತಿ ಕೂಡಲೇ ಸ್ಥಳಕ್ಕೆ ತೆರಳಿದ್ದು, ಪತ್ನಿಯ ಮನವೊಲಿಸಲು ಮುಂದಾಗಿದ್ದಾರೆ. ಪತಿ ಹತ್ತಿರ ಬರುತ್ತಿದ್ದಂತೆ ಮಹಿಳೆ ಕಟ್ಟಡದಿಂದ ಜಿಗಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಪತಿ-ಪತ್ನಿಯ ನಡುವೆ ಇದ್ದ ಮನಸ್ತಾಪ, ಯಾವ ಕಾರಣಕ್ಕೆ ಮಹಿಳೆ ಇಂತಹ ನಿರ್ಧಾರ ತಗೆದುಕೊಂಡರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಮಹಿಳೆಯ ಪತಿ ಹಾಗೂ ನೆರೆಹೊರೆಯವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.