

ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಕಾಸರಗೋಡು ಹಾಗೂ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ಸೇರಿದಂತೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂಬಳೆ ಮಾವಿನಕಟ್ಟೆ ನಿವಾಸಿ ಹರೀಶ್ ಗಟ್ಟಿ ಎಂಬುವರ ಪುತ್ರ, ಲೈಟಿಂಗ್ಸ್ ಸಂಸ್ಥೆ ಸಿಬ್ಬಂದಿ ನಿತಿನ್‌ಕುಮಾರ್ ಗಟ್ಟಿ(25) ಮತದೇಹ ಮನೆ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ತಡ ರಾತ್ರಿ ಮನೆಗೆ ಆಗಮಿಸಿದ್ದ ಅವರು, ಆಹಾರ ಸೇವಿಸಿ ಕೊಠಡಿಯಲ್ಲಿ ಮಲಗಿದ್ದು, ಮಂಗಳವಾರ ಬೆಳಗ್ಗೆ ಬಹಳ ಹೊತ್ತಿನವರೆಗೂ ಎದ್ದೇಳದ ಹಿನ್ನೆಲೆಯಲ್ಲಿ ಮನೆಯವರು ಕೊಠಡಿಗೆ ತೆರಳಿ ನೋಡಿದಾಗ ನಿತಿನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಕಾಲೇಜು ವಸತಿಗೃಹದ ಕೊಠಡಿಯಲ್ಲಿ ವಿದ್ಯಾರ್ಥಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾಣತ್ತೂರು ಕಣಿತ್ತೋಡು ನಿವಾಸಿ, ದಿನೇಶನ್ ಎಂಬುವರ ಪುತ್ರ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಥಮ ವರ್ಷ ಬಿ.ಎಸ್ಸಿ(ಪ್ರಾಣಿಶಾಸ್ತ್ರ) ವಿದ್ಯಾರ್ಥಿ ಅಭಿಷೇಕ್ ಪಿ.ಡಿ.(20) ಆತ್ಮಹತ್ಯೆ ಮಾಡಿಕೊಂಡವರು. ಸರ್ಕಾರಿ ಕಾಲೇಜಿನ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿ ಕಾಲೇಜಿಗೆ ತೆರಳುತ್ತಿದ್ದರು. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚೆಂಗಳ ಬಾರಿಕ್ಕಾಡ್ ನಾಲ್ತಡ್ಕ ನಿವಾಸಿ ಗೋಪಾಲನ್(72) ಎಂಬುವರ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯವೆಸಗಿದ್ದರು. ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.