ಎತ್ತರದ ಕಟ್ಟಡದಿಂದ ಜಿಗಿದ ಯುವಕ ತಕ್ಷಣವೇ ಎದ್ದು ನಿಂತ: ಆತ್ಮಹತ್ಯೆ ಯತ್ನ ಬೆನ್ನಲ್ಲೆ ನಡೆಯಿತು ಚಮತ್ಕಾರ!

Suicide Attemt
Published on

ಬೀಜಿಂಗ್​: ಆತ್ಮಹತ್ಯೆ ಮುಂದಾದ ಚೀನಾ ಯುವಕನೊರ್ವ ಎಂಟು ಅಂತಸ್ತಿನ ಬೃಹತ್​​ ಕಟ್ಟಡದ ಮೇಲಿಂದ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ನಡೆದಿದೆ.

ಯುವಕನನ್ನು ಝಾಂಗ್ (21)​ ಎಂದು ಗುರುತಿಸಲಾಗಿದೆ. ಕಟ್ಟಡದಿಂದ ಜಿಗಿದ ಯುವಕ ಕೆಳಗಿನ ಮಿನಿವ್ಯಾನ್​ ಪಾರ್ಕಿಂಗ್​ ಜಾಗದ ಬಳಿ ಬಿದ್ದಿದ್ದಾನೆ. ಅಚ್ಚರಿಯೆಂದರೆ ಮೇಲಿಂದ ಬಿದ್ದರೂ ಯಾವುದೇ ಗಾಯದ ಗುರುತಿಲ್ಲ. ಅಲ್ಲದೆ, ಪ್ರಜ್ಞೆಯೂ ಹೋಗಿರಲಿಲ್ಲ. ಸುಮಾರು 10 ನಿಮಿಷ ಬಿದ್ದ ಜಾಗದಲ್ಲಿ ಕುಳಿತಿದ್ದ ಆತನನ್ನು ಸ್ಥಳೀಯರ ಆನಂತರ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬುಧವಾರ ರಾತ್ರಿ 7 ಗಂಟೆಗೆ ದಕ್ಷಿಣ ಚೀನಾದ ಶೆನ್ಜೆನ್ ಜಿಲ್ಲೆಯ ಲಾಂಗ್‌ಗ್ಯಾಂಗ್​ನಲ್ಲಿ ನಡೆದಿದೆ. ಆರಂಭದಲ್ಲಿ ಯುವಕ ಕೆಳಗೆ ಬಿದ್ದ ಶಬ್ಧವು ದಾರಿಹೋಕರಿಗೆ ಕಾರಿನ ಟೈರ್​ ಸ್ಪೋಟಗೊಂಡಂತೆ ಕೇಳಿದೆ. ಬಳಿಕ ಯುವಕ ಎಂಬುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊದಲ ಕಾರಿನ ಮೇಲೆ ಬಿದ್ದು, ಬಳಿಕ ನೆಲಕ್ಕೆ ಉರುಳಿ ಬಿದ್ದರಿಂದ ಆತನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಯುವಕ ಕೆಳಗೆ ಬಿದ್ದ ತಕ್ಷಣ ಮೊದಲು ತಾನೇ ಎದ್ದು ನಿಂತಿದ್ದಾನೆ. ಆದರೆ, ಕೆಲ ಸಮಯದ ಬಳಿಕ ಬೆವರಲು ಆರಂಭಿಸಿದ್ದಾನೆ. ಅಲ್ಲದೆ, ಆತನ ಮುಖದ ಬಣ್ಣ ಬದಲಾಗಲು ಆರಂಭಿಸಿದೆ. ಯುವಕ ಮಿನಿ ವ್ಯಾನ್​ ಮೇಲೆ ತನ್ನ ಬೆನ್ನು ಮಾಡಿ ಬಿದ್ದಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ವ್ಯಾನ್​ನ ಟಾಪ್​ ಸಮತಟ್ಟಾಗಿದ್ದರಿಂದ ಆತ ಬದುಕುಳಿದಿದ್ದಾನೆ. ಇಲ್ಲವಾದಲ್ಲಿ ಆತನ ಸಾವು ನಿಶ್ಚಿತವಾಗಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

ರಾತ್ರಿಯಾಗಿದ್ದರಿಂದ ಘಟನೆ ನಂತರ ಸ್ಥಳದಲ್ಲಿ ಕೆಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಇದು ನಿಜಕ್ಕೂ ಊಹಿಸಲಾಗದ ಘಟನೆ. ಆತನ ಅದೃಷ್ಟ ನೋಡಿ ಪ್ರತ್ಯಕ್ಷದರ್ಶಿಗಳು ಬೆರಗಾಗಿದ್ದಾರೆ.

ಅಷ್ಟಕ್ಕೂ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದಕ್ಕೆ ಅವರ ಸಂಬಂಧಿಕರು ಸ್ಪಷ್ಟನೆ ನೀಡಿದ್ದು, ಯುವಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದಿದ್ದಾರೆ. ಈ ಸಂಬಂಧ ಲಾಂಗ್‌ಗ್ಯಾಂಗ್​​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net