

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿನ ಅಲ್ಪ ಪ್ರಮಾಣದ ಮಳೆ ಕಬ್ಬಿನ ಇಳುವರಿ ಮೇಲೆ ಪರಿಣಾಮ ಬೀರಬಹುದಾದ ಕಾರಣ ಅಕ್ಟೋಬರ್ ನಿಂದ ಪ್ರಾರಂಭವಾಗುವ ಮುಂದಿನ ಋತುವಿನಲ್ಲಿ ಸಕ್ಕರೆ ರಫ್ತು ನಿಷೇಧಿಸಲು ಭಾರತ ಸರ್ಕಾರ ಚಿಂತನೆ ಆರಂಭಿಸಿದೆ. ಈ ವರ್ಷ ಕಬ್ಬು ಬೆಳೆಯುವ ಅಗ್ರ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದುವರೆಗೆ ಸರಾಸರಿಗಿಂತ ಶೇಕಡಾ 50ರಷ್ಟು ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ಸೂಚಿಸಿವೆ.
ಕಳೆದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರವು ಒಡೆದ ಅಕ್ಕಿಯ ರಫ್ತನ್ನು ಸ್ಥಗಿತಗೊಳಿಸಿತ್ತು, ಜತೆಗೆ ವಿವಿಧ ದರ್ಜೆಯ ಧಾನ್ಯಗಳ ರಫ್ತಿನ ಮೇಲೆ ಶೇಕಡಾ 20ರಷ್ಟು ಸುಂಕ ವಿಧಿಸಿತ್ತು. ಹೆಚ್ಚುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸಲು ಕಳೆದ ಮೇ ತಿಂಗಳಲ್ಲಿ ಭಾರತವು ಗೋಧಿ ರಫ್ತು ಕೂಡ ನಿಷೇಧಿಸಿದೆ. ಈ ವರ್ಷದ ಜುಲೈನಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ಮಳೆಯಿಂದಾಗಿ ಭತ್ತದ ಬೆಳೆ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪೂರೈಕೆ ಕೊರತೆ ಕಳವಳದ ಕಾರಣ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತು ಮಾಡುವುದನ್ನು ಕೂಡ ಕೇಂದ್ರ ಸರ್ಕಾರ ನಿಷೇಧಿಸಿದೆ. ದೇಶೀಯ ಬೆಲೆಗಳ ತೀವ್ರ ಏರಿಕೆಯ ಕಾರಣಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯವು ಈರುಳ್ಳಿಗೆ ಶೇಕಡಾ 40 ರಫ್ತು ಸುಂಕವನ್ನು ಕೆಲ ದಿನಗಳ ಹಿಂದೆ ವಿಧಿಸಿದೆ.
ಜುಲೈನಲ್ಲಿ, ಆಹಾರ ಹಣದುಬ್ಬರ ಭಾರತದಲ್ಲಿ ಶೇಕಡಾ 11.5 ಕ್ಕೆ ಏರಿದ್ದು, ಇದು ಮೂರು ವರ್ಷಗಳಲ್ಲಿ ಅತ್ಯಧಿಕವಾಗಿದೆ. ಹೀಗಾಗಿ, ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಫ್ತು ನಿಷೇಧದ ಮುಂದಿನ ಸರದಿ ಸಕ್ಕರೆಯದ್ದಾಗಲಿದೆ ಎನ್ನಲಾಗಿದೆ. ಬೆಲೆಗಳನ್ನು ನಿಯಂತ್ರಿಸಲು ಮತ್ತು ಅಗತ್ಯ ಪ್ರಮಾಣದಲ್ಲಿ ಸ್ಥಳೀಯ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಅಕ್ಟೋಬರ್ನಿಂದ ಪ್ರಾರಂಭವಾಗುವ ಮುಂದಿನ ಋತುವಿನಲ್ಲಿ ಸಕ್ಕರೆ ರಫ್ತು ನಿಷೇಧಿಸಲು ಸಜ್ಜಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈಗಾಗಲೇ ಅನೇಕ ಆಹಾರ ಪದಾರ್ಥಗಳ ರಫ್ತು ನಿರ್ಬಂಧಿಸಿರುವುದನ್ನು ಗಮನಿಸಿದರೆ, ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧಿಸುವ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
‘ನಮ್ಮ ಪ್ರಾಥಮಿಕ ಗಮನವು ಸ್ಥಳೀಯ ಸಕ್ಕರೆ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವುದು ಆಗಿದೆ. ಮುಂಬರುವ ಋತುವಿನಲ್ಲಿ ರಫ್ತು ಮಾಡುವುದಕ್ಕೆ ನಾವು ಸಾಕಷ್ಟು ಸಕ್ಕರೆ ಹೊಂದಿರುವುದಿಲ್ಲ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ಪ್ರಸಕ್ತ ಋತುವಿನಲ್ಲಿ ಸಕ್ಕರೆ ರಫ್ತು ಮಾಡುವುದಕ್ಕೆ 61 ಲಕ್ಷ ಟನ್ ಮಿತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಗದಿಪಡಿಸಿದೆ. ಹಿಂದಿನ ವರ್ಷದಲ್ಲಿ ಈ ಮಿತಿಯು 1.1 ಕೋಟಿ ಟನ್ ಇತ್ತು ಎಂಬುದು ಗಮನಾರ್ಹ. ‘ಕಳೆದ ಎರಡು ವರ್ಷಗಳಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸಕ್ಕರೆ ರಫ್ತು ಮಾಡಲು ಕಾರ್ಖಾನೆಗಳಿಗೆ ಅವಕಾಶ ನೀಡಿದ್ದೇವೆ. ಆದರೆ, ಈಗ ನಾವು ದೇಶದ ಮಾರುಕಟ್ಟೆಯಲ್ಲಿ ಸಕ್ಕರೆಯ ಸಾಕಷ್ಟು ಸರಬರಾಜು ಮತ್ತು ಸ್ಥಿರ ಬೆಲೆಗಳನ್ನು ಖಚಿತಪಡಿಸಿಕೊಳ್ಳಬೇಕು’ ಎಂದೂ ಸರ್ಕಾರಿ ಮೂಲಗಳು ಹೇಳುತ್ತವೆ.
ಸಾಮಾನ್ಯವಾಗಿ ಅಕ್ಟೋಬರ್ನ ಹೊಸ ಋತುವಿನ ಆರಂಭದೊಂದಿಗೆ ಸರ್ಕಾರವು ಸಕ್ಕರೆ ರಫ್ತು ಕೋಟಾ ಘೊಷಿ ಸುತ್ತದೆ. ಹೀಗಾಗಿ ಕೋಟಾ ಎಷ್ಟು? ಎಂದು ಕಾರ್ಖಾನೆಗಳು ನಿರೀಕ್ಷಿಸುತ್ತಿರುತ್ತವೆ. ಆದರೆ, ಈ ಬಾರಿ ಇಂತಹ ನಿರೀಕ್ಷೆಯನ್ನು ಕಾರ್ಖಾನೆಗಳು ಕೈಬಿಡಬೇಕು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕನಿಷ್ಠ 2024ರ ಮಾರ್ಚ್ 31ರವರೆಗೆ ಸಕ್ಕರೆ ರಫ್ತು ನಿರ್ಬಂಧಿಸಬಹುದಾಗಿದೆ. ಇದು ದೇಶೀಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
2023-24ರ ಋತುವಿನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆ ಶೇಕಡಾ 3.3 ಕುಸಿತ ಕಾಣಲಿದೆ. ಪ್ರಸಕ್ತ ಋತುವಿನಲ್ಲಿ 3.28 ಕೋಟ್ ಟನ್ ಸಕ್ಕರೆ ಉತ್ಪಾದನೆಯಾಗಬಹುದಾಗಿದೆ. ಆದರೆ, ಮುಂದಿನ ಋತುವಿನಲ್ಲಿ ಇದು 3.168 ಕೋಟಿ ಟನ್ಗಳಿಗೆ ಕುಸಿಯಲಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘಟನೆ (ಐಎಸ್ಎಂಎ) ಅಂದಾಜಿಸಿದೆ. ಆದರೆ, ಈ ಅಂದಾಜನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ‘ಮುಂದಿನ ಋತುವಿನಲ್ಲಿ ಸಕ್ಕರೆ ಉತ್ಪಾದನೆಯು (ಎಥೆನಾಲ್ ಬಳಕೆಗೆ ಬಳಸಿಕೊಂಡ ನಂತರ) ಅಂದಾಜು 3.25
ಎಂದು ನಾವು ನಿರೀಕ್ಷಿಸುತ್ತೇವೆ. ಇದು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ಪ್ರಸ್ತುತ ಋತುವಿನ ಉತ್ಪಾದನೆಗೆ ಬಹುತೇಕ ಸಮನಾಗಿರುತ್ತದೆ ಎಂದು
ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಎರಡು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ವರ್ಷ ಜುಲೈನಲ್ಲಿ ಸಕ್ಕರೆಯ ಮಾರುಕಟ್ಟೆ ಬೆಲೆ ಕ್ವಿಂಟಲ್ಗೆ 3,422-3,539 ರೂಪಾಯಿ ಇತ್ತು. ಈ ವರ್ಷ ಜುಲೈನಲ್ಲಿ ಕ್ವಿಂಟಲ್ಗೆ 3,624-3,743 ರೂಪಾಯಿಗೆ ತಲುಪಿತು. ಈಗ ಅಂದಾಜು 3,775 ರೂಪಾಯಿಗೆ ಏರಿದೆ. ಮಾರುಕಟ್ಟೆಯಲ್ಲಿ ವ್ಯಾಪಕ ಪೂರೈಕೆಯ ಹೊರತಾಗಿಯೂ ಸಕ್ಕರೆ ಬೆಲೆ ಹೆಚ್ಚಿನ ಮಟ್ಟದಲ್ಲಿದ್ದು, ಈ ಅಸಹಜ
ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸ ಬೇಕೆಂದು ಬಾಂಬೆ ಶುಗರ್ ಮರ್ಚೆಂಟ್ಸ್ ಅಸೋಸಿಯೇಶನ್ ಲಿಮಿಟೆಡ್ ಪತ್ರ ಬರೆದಿದೆ.
ಇಂಟರ್ನ್ಯಾಷನಲ್ ಶುಗರ್ ಆರ್ಗನೈಸೇಶನ್ ಪ್ರಕಾರ, ಬ್ರೆಜಿಲ್ ನಂತರ ಭಾರತವು ಎರಡನೇ ಅತಿ ದೊಡ್ಡ ಸಕ್ಕರೆ ರಫ್ತುದಾರ ರಾಷ್ಟ್ರವಾಗಿದೆ. ಭಾರತದ ರಫ್ತು ನಿಷೇಧವು ಅಮೆರಿಕದ ನ್ಯೂಯಾರ್ಕ್ ಮತ್ತು ಬ್ರಿಟನ್ನ ಲಂಡನ್ನಲ್ಲಿ ಬೆಂಚ್ ಮಾರ್ಕ್ ಬೆಲೆಗಳನ್ನು ಹೆಚ್ಚಿಸಬಹುದು. ಇದು ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಮತ್ತಷ್ಟು ಹಣದುಬ್ಬರದ ಕಳವಳಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಭಾರತವು ರಫ್ತು ನಿಷೇಧ ಹೇರಿದರೆ, ಈ ಕೊರತೆಯನ್ನು ಬ್ರೆಜಿಲ್ ಮಾತ್ರ ಪೂರೈಸ ಬೇಕಾಗುತ್ತದೆ. ಏಕೆಂದರೆ ಸಕ್ಕರೆಯ ಮತ್ತೊಂದು ಅಗ್ರ ರಫ್ತುದಾರ ದೇಶವಾದ ಥೈಲ್ಯಾಂಡ್ನಲ್ಲಿ ಸಕ್ಕರೆ ಉತ್ಪಾದನೆಯು ಕುಸಿಯುವ ನಿರೀಕ್ಷೆ ಇದೆ.
ಎಥೆನಾಲ್ ತಯಾರಿಕೆಗಾಗಿ 40 ಲಕ್ಷ ಟನ್ ಸಕ್ಕರೆಯನ್ನು ಪ್ರಸ್ತುತ ಋತುವಿನಲ್ಲಿ ಬಳಸಲಾಗುತ್ತಿದ್ದು, ಮುಂದಿನ ಋತುವಿನಲ್ಲಿ ಇದನ್ನು 50- 55 ಟನ್ಗೆ ಹೆಚ್ಚಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆಗೆ 45 ಲಕ್ಷ ಟನ್ ಸಕ್ಕರೆಯನ್ನು ಒದಗಿಸಬಹುದು ಎಂದು ಐಎಸ್ಎಂಎ ಅಂದಾಜಿಸಿದೆ. ಇದು ಹಿಂದಿನ ವರ್ಷಕ್ಕಿಂತ 9.8 ರಷ್ಟು ಹೆಚ್ಚಳವಾಗಿರಲಿದೆ.
ಪ್ರಸ್ತುತ ದೇಶದಲ್ಲಿ ಸಕ್ಕರೆಯ ಕೊರತೆಯಿದೆ ಎಂದು ನಾವು ಭಾವಿಸಿದ್ದೇವೆ. ಅಕ್ಟೋಬರ್ನಿಂದ ಪ್ರಾರಂಭವಾಗುವ ಮುಂದಿನ ಸುಗ್ಗಿಯಲ್ಲಿ ಸಕ್ಕರೆ ಉತ್ಪಾದನೆ ಏನಾಗುತ್ತದೆ ಎಂದು ಈಗಲೇ ನಿರ್ಣಯಿಸುವುದು ಹೆಚ್ಚು ಅಕಾಲಿಕವಾಗಿದೆ.
| ಸಂಜೀವ್ ಚೋಪ್ರಾ ಕೇಂದ್ರ ಆಹಾರ ಕಾರ್ಯದರ್ಶಿ