

ಬೆಂಗಳೂರು: ನಮ್ಮಲ್ಲಿನ ಆಸಕ್ತಿಯೇ ಆದ್ಯತೆಯಾದಾಗ ಗುರಿ ರೂಪಿಸಿಕೊಳ್ಳುವುದು ಸುಲಭವಾದರೆ, ಸೂಕ್ತ ಮಾರ್ಗದರ್ಶಕರ ನೆರಳಲ್ಲಿ ನಡೆದಾಗ ಗುರಿ ತಲುಪುವುದು ಸುಗಮವಾಗುತ್ತದೆ. ಆದ್ದರಿಂದಲೇ ಜೀವನದಲ್ಲಿ ಮುಂದೆ ಗುರಿ, ಹಿಂದೆ ಗುರು ಇರುವುದು ಮುಖ್ಯ ಎನ್ನುತ್ತಾರೆ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ 30ನೇ ರ್ಯಾಂಕ್ ಹೋಲ್ಡರ್(2022) ಸುಚೇತ್ ಬಾಳ್ಕಲ್.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದವರಾದ ಸುಚೇತ್ ಬಾಳ್ಕಲ್ ಅವರ ತಂದೆ ರಾಮಕೃಷ್ಣ, ತಾಯಿ ಶ್ರೀಮತಿ. ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದು, ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯಲ್ಲಿ ತಾಲೂಕಿಗೆ 2ನೇಯವರಾಗಿ ಶೈಕ್ಷಣಿಕ ಸಾಧನೆಗೈದಿದ್ದರು. ಶಿರಸಿಯ ಚೈತನ್ಯ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮಾಡಿದ್ದು, ಬೆಂಗಳೂರಿನ ಆರ್ವಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವೀಧರರಾಗಿದ್ದಾರೆ.
ಸುಚೇತ್ ಬಾಳ್ಕಲ್ ಸ್ಪರ್ಧಾ ಪರೀಕ್ಷೆ ತೆಗೆದುಕೊಳ್ಳಲು ಸ್ಫೂರ್ತಿಯೇ ಅವರ ಅಕ್ಕ ಸಹನಾ ಬಾಳ್ಕಲ್. ಪ್ರಸ್ತುತ ಕಮರ್ಷಿಯಲ್ ಟ್ಯಾಕ್ಸ್ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸ್ಪರ್ಧಾ ಪರೀಕ್ಷೆ ತಯಾರಿಯಲ್ಲಿ ಪ್ರಮುಖ ಪಾತ್ರವಹಿಸುವ, ಮಾರ್ಗದರ್ಶಕಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಸಹೋದರನ ಸಾಧನೆಗೆ ಬೆನ್ನೆಲುಬಾಗಿದ್ದರು. ಮನೆಯಲ್ಲಿಯೇ ಒಬ್ಬರು ಅಧಿಕಾರಿಯಾಗಿದ್ದಾಗ ಸಹಜವಾಗಿಯೇ ಆಸಕ್ತಿ ಬೆಳೆಯುತ್ತದೆ. ಅಂತೆಯೇ ಸುಚೇತ್ ಅವರು ಸಹ ಅಕ್ಕನಿಂದ ಪ್ರೇರಣೆಗೊಂಡು ಸ್ಪರ್ಧಾ ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದರು.
2019ರಿಂದ ಸ್ಪರ್ಧಾ ಪರೀಕ್ಷೆ ತಯಾರಿ ಪ್ರಾರಂಭಿಸಿದ್ದ ಸುಚೇತ್, 2020 ಹಾಗೂ 2021ರಲ್ಲಿ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದರು. 2ನೇ ಪ್ರಯತ್ನದಲ್ಲಿ ಸಂದರ್ಶನದವರೆಗೂ ತಲುಪಿ ನಪಾಸ್ ಆದ ನಂತರ 2022ರಲ್ಲಿ ಭಾರತೀಯ ಅರಣ್ಯ ಸೇವಾ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರಂತಯೇ ಮೊದಲ ಪ್ರಯತ್ನದಲೇ ಆಯ್ಕೆ ಪಟ್ಟಿಯಲ್ಲಿ 30ನೇ ಸ್ಥಾನ ಪಡೆಯುವ ಮೂಲಕ ಇಂದು ಅರಣ್ಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಐಎಫ್ಎಸ್ ಪರೀಕ್ಷೆಯಲ್ಲಿ ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಹಂತಗಳಿದ್ದು, ಪ್ರತಿ ಹಂತವು ವಿಭಿನ್ನ ತಯಾರಿಯನ್ನು ಅಪೇಸುತ್ತವೆ. ಪ್ರಿಲಿಮ್ಸ್ ಬಹು ಆಯ್ಕೆ ಆಧಾರಿತ ಪ್ರಶ್ನೆ ಪತ್ರಿಕೆಯಾಗಿದ್ದು, ಇದನ್ನು ಸುಲಭವಾಗಿ ಎದುರಿಸಬೇಕೆಂದರೆ ಹಿಂದಿನ ನಾಗರಿಕ ಸೇವಾ ಪ್ರಶ್ನೆಪತ್ರಿಕೆಯನ್ನು ಹೆಚ್ಚೆಚ್ಚು ಬಿಡಿಸಬೇಕು. 2ನೇ ಹಂತವಾದ ಮುಖ್ಯ ಪರೀಕ್ಷೆಯು ಬರವಣಿಗೆ ಮೇಲೆ ನಿಂತಿದ್ದು, ಪ್ರಬಂಧ ಬರೆದು ವೇಗ ಹೆಚ್ಚಿಸಿಕೊಳ್ಳಬೇಕು. ಇನ್ನು 3ನೇ ಹಂತ ಸಂದರ್ಶನ. ಅಭ್ಯರ್ಥಿಯ ವ್ಯಕ್ತಿತ್ವ ಪರೀಕ್ಷೆ ನಡೆಯುತ್ತದೆ. ಡಿಟೆಲ್ಡ್ ಅಪ್ಲಿಕೇಷನ್ ಫಾಮ್ರ್ನಲ್ಲಿ ಇರುವುದರ ಕುರಿತೆ ಪ್ರಶ್ನೆ ಕೇಳಲಾಗುವುದರಿಂದ ಸತ್ಯವನ್ನೇ ಹೇಳಬೇಕು.
ನಾಗರಿಕ ಸೇವಾ ಪರೀಕ್ಷೆಗಿಂತ ಅರಣ್ಯ ಸೇವಾ ಪರೀಕ್ಷೆ ವಿಭಿನ್ನವಾಗಿದ್ದು, ಪ್ರಿಲಿಮ್ಸ್ ಪ್ರಶ್ನೆಪತ್ರಿಕೆ ಮಾತ್ರ ಎರಡೂ ಪರೀಕ್ಷೆಗೂ ಒಂದೇ ತೆರನಾಗಿರುತ್ತದೆ. ಐಎಫ್ಎಸ್ ಹುದ್ದೆಗಳು ಸೀಮಿತವಾಗಿದ್ದು, ಕಟ್ ಆಫ್ ಅಂಕ ಹೆಚ್ಚಿರುತ್ತದೆ. ಆದ್ದರಿಂದ 90ಕ್ಕಿಂತ ಹೆಚ್ಚು ಪ್ರಶ್ನೆಗೆ ಉತ್ತರಿಸಬೇಕು. ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಹಾಗೂ ಸಾಮಾನ್ಯ ಇಂಗ್ಲಿಷ್ ಪತ್ರಿಕೆಯು ಮುಖ್ಯವಾಗಿದ್ದು, ಇವುಗಳಲ್ಲಿನ ಅಂಕಗಳನ್ನೂ ರ್ಯಾಂಕಿಂಗ್ಗೆ ಪರಿಗಣಿಸಲಾಗುತ್ತದೆ.
ಸ್ಪರ್ಧಾ ಪರೀಕ್ಷೆ ತಯಾರಿ ಪ್ರಾರಂಭಿಸಿದ ನಂತರ ನಿರಂತರತೆ ಇರಲೇಬೇಕು. ಕೆಲವೊಮ್ಮೆ ಹೊಸ ವಿಷಯ ಓದಲು ಬೋರ್ ಎನಿಸಿದಾಗ ಓದಿರುವ ವಿಷಯಗಳನ್ನೇ ಪುನರ್ ಮನನ ಮಾಡಬೇಕು. ದಿನಪತ್ರಿಕೆ ಓದುವುದು ಕಡ್ಡಾಯ. ಮಾರ್ಗದರ್ಶನವಿದ್ದರೆ ಸ್ವಪ್ರಯತ್ನಿದಿಂದಲೇ ಪರೀಕ್ಷೆ ತೆಗೆದುಕೊಳ್ಳಬಹುದು. ಸಂದರ್ಶನದಲ್ಲಿ ನಮ್ಮ ಹವ್ಯಾಸದ ಬಗ್ಗೆ ಕೇಳುತ್ತಾರೆ. ಆದ್ದರಿಂದ ತಯಾರಿ ಸಮಯದಲ್ಲಿಯೇ ಒಳ್ಳೆ ಹವ್ಯಾಸ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಸುಚೇತ್.