ಭಾರತವನ್ನು ಕೆಣಕಿದವನ ವಿರುದ್ಧ ಸಮರಕ್ಕೆ ನಿಂತ ಸುಬ್ರಮಣಿಯನ್​ ಸ್ವಾಮಿ

ADAMA- Subramaniam swami
Published on

ನವದೆಹಲಿ: ವಿಶ್ವ ಸಂಸ್ಥೆಯಲ್ಲಿ ವಿಶೇಷ ಸಲಹೆಗಾರರಾಗಿರುವ ಅದಾಮಾ ಡಿಂಗ್​ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಸಮರಕ್ಕೆ ನಿಂತಿದ್ದಾರೆ. ನಾನು ನೀಡದ ಹೇಳಿಕೆಯನ್ನು ನನಗೆ ಆರೋಪಿಸಿರುವ ಅದಾಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಸಮರ ನಡೆಸುವುದಾಗಿ ಸ್ವಾಮಿ ಘೋಷಿಸಿದ್ದಾರೆ.

ಸುಬ್ರಮಣಿಯನ್​ ಸ್ವಾಮಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದು, ಈ ಹೋರಾಟದಲ್ಲಿ ಪಕ್ಷವೂ ಅವರಿಗೆ ಬೆಂಬಲ ನೀಡಿದೆ. ಇದಕ್ಕಾಗಿ ಸ್ವಾಮಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜತೆಗೆ ಇದಕ್ಕೆ ಅವಕಾಶ ಕಲ್ಪಿಸಿದ ವಿದೇಶಾಂಗ ಇಲಾಖೆಗೂ ಅವರು ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾವ ಹರಡುವ ಹೇಳಿಕೆಗಳು ಹಾಗೂ ತಾರತಮ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕರಿಸಿದ ಬಳಿಕ ಈ ಪ್ರವೃತ್ತಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅದಾಮಾ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯರಾಗಿರುವ ಸುಬ್ರಮಣಿಯನ್​ ಸ್ವಾಮಿ ಹೇಳಿದ್ದರೆನ್ನಲಾದ ಹೇಳಿಕೆಯೊಂದನ್ನು ಪ್ರಸ್ತಾಪಿಸಿ ಅದಾಮಾ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.

ಪಾಕಿಸ್ತಾನದ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ಮುಸ್ಲಿಮರು ಹಿಂದುಗಳಿಗೆ ಸಮಾನರಲ್ಲ ಎಂದು ಹೇಳಿದ್ದಾಗಿ ಅದಾಮಾ ಟೀಕಿಸಿದ್ದರು.

ಪಾಕ್​ ವಾಹಿನಿಯ ಕೃತ್ರಿಮ ಸಂದರ್ಶನ ಆಧರಿಸಿ ತನ್ನ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಅದಾಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸ್ವಾಮಿ ನಿರ್ಧರಿಸಿದ್ದರು. ಇದನ್ನು ವಿದೇಶಾಂಗ ಇಲಾಖೆ ಗಮನಕ್ಕೂ ತಂದಿದ್ದರು. ಇದೀಗ ಅದಾಮಾಗೆ ನೋಟಿಸ್​ ಕಳುಹಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಸುಬ್ರಮಣಿಯನ್​ ಸ್ವಾಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net