ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ(ಆಗಸ್ಟ್ 16) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಜತೆ ಮುಹಮ್ಮದ್ ಯೂನಸ್ ಮಾತುಕತೆ; ಉಭಯ ನಾಯಕರ ಚರ್ಚೆ ಕುರಿತು ಪಿಎಂಒ ಕಚೇರಿ ಹೇಳಿದಿಷ್ಟು
ಸುಬ್ರಮಣಿಯನ್ ಸ್ವಾಮಿ ಅವರು 2019ರಲ್ಲಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಅದರಲ್ಲಿ ಬ್ಯಾಕ್ಆಪ್ಸ್ ಲಿಮಿಟೆಡ್ ಹೆಸರಿನ ಸಂಸ್ಥೆಯನ್ನು 2003ರಲ್ಲಿ ಬ್ರಿಟನ್ನಲ್ಲಿ ನೋಂದಾಯಿಸಲಾಗಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಅದರ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.
ಸಂಸ್ಥೆಯು 2005 ಅಕ್ಟೋಬರ್ 10 ಮತ್ತು 2006 ಅಕ್ಟೋಬರ್ 31ರಂದು ಸಲ್ಲಿಸಿದ ವಾರ್ಷಿಕ ರಿಟರ್ನ್ಸ್ನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. 2009 ಫೆಬ್ರವರಿ 17ರಂದು ಬ್ಯಾಕ್ಆಪ್ಸ್ ಲಿಮಿಟೆಡ್ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿಯೂ ಮತ್ತೆ ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. ಇದು ಭಾರತದ ಸಂವಿಧಾನದ 9ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯಿದೆ, 1955 ಅನ್ನು ಉಲ್ಲಂಘಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿರುವುದಾಗಿ ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.
2019 ಏಪ್ರಿಲ್ 29ರಂದು ಗೃಹ ಸಚಿವಾಲಯವು ರಾಹುಲ್ಗಾಂಧಿಗೆ ಪತ್ರ ಬರೆದು, ಈ ವಿಷಯದ ಕುರಿತು ಹದಿನೈದು ದಿನದೊಳಗೆ ವಾಸ್ತವಿಕ ನಿಲುವನ್ನು ಮುಂದಿಡುವಂತೆ ಕೇಳಿದೆ. ಆದರೆ ಪತ್ರ ಬರೆದು ಐದು ವರ್ಷಗಳು ಕಳೆದರೂ ರಾಹುಲ್ ಗಾಂಧಿ ಈ ಬಗ್ಗೆ ಗೃಹ ಸಚಿವಾಲಯಕ್ಕೆ ಯಾವುದೆ ಸ್ಪಷ್ಟನೆ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಮುಂದಿನ ವಾರ ನಡೆಯಲಿದೆ. (ಏಜೆನ್ಸೀಸ್)